ತೂಮಿನಾಡು-ಪದವು ರಸ್ತೆ 17ರಿಂದ 1 ತಿಂಗಳು ಬಂದ್

ಕಾಂಕ್ರೀಟೀಕರಣ ಕಾಮಗಾರಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಯೋಜನೆಯ 2016-2017ರ ಭಾಗವಾಗಿ ಆಡಳಿತಾನುಮತಿ ಲಭಿಸಿದ ಹಾಗೂ ಹಾರ್ಬರ್ ಇಂಜಿಯರಿಂಗ್ ಇಲಾಖೆ ಮುಖಾಂತರ ನಡೆಸಲ್ಪಡುವ ಮಂಜೇಶ್ವರ ಗ್ರಾ ಪಂ.ನ 2ನೇ ವಾರ್ಡ್ ತೂಮಿನಾಡು-ಪದವು (685) ಮೀಟರ್ ರಸ್ತೆ ನಿರ್ಮಾಣ ಕಾರ್ಯಗಳು ಆಗಸ್ಟ್ 17ರಿಂದ ಒಂದು ತಿಂಗಳಿನ ಕಾಲಾವಧಿಗೆ  ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಒಂದು ತಿಂಗಳು ನಿಷೇಧ ಹೇರಿ ರಸ್ತೆ ಸಂಪೂರ್ಣ ಮುಚ್ಚುಗಡೆಗೊಳ್ಳಲಿರುವುದಾಗಿ ಅಧಿಕೃತರು ತಿಳಿಸಿದ್ದಾರೆ.

ಲೋಕಪಯೋಗಿ ಇಲಾಖೆಯ ವತಿಯಿಂದ ತೂಮಿನಾಡು ಬಾಚಲಿಕೆ ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರ ಒಂದು ಕೋಟಿ ಅರುವತ್ತೈದು ಲಕ್ಷ ರೂ ಪಡೆದು ಕಳಪೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಈ ರಸ್ತೆ ಒಂದು ವರ್ಷಕ್ಕಿಂತ ಮೊದಲೇ ಹದೆಗೆಟ್ಟಿತ್ತು. ಬಳಿಕ ವಾರ್ಡ್ ಸದಸ್ಯರಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವಂತೆ ಗ್ರಾಮಸ್ಥರು ಬೇಡಿಕೊಂಡಿದ್ದರೂ ಯಾವುದೇ ಸ್ಪಂದನೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕೆಲವು ನಾಗರಿಕರು ಹಾರ್ಬರ್ ಇಂಜಿನಿಯರವರಲ್ಲಿ ನಡೆಸಿದ ವಿನಂತಿಯಂತೆ ಇದೀಗ ಕಾಮಗಾರಿ ನಡೆಯಲಿದೆ.