ಕೊನೆಗೂ ನೆನೆಗುದಿಗೆ ಬಿದ್ದಿದ್ದ ತೂಮಿನಾಡು ಕಾಲೊನಿ ಪಂಪಿಗೆ ಸಿಕ್ಕಿತು ವಿದ್ಯುತ್ ಸಂಪರ್ಕ

ವಿದ್ಯುತ್ ಸಂಪರ್ಕ ಲಭಿಸಿದ ಪಂಪ್ ಶೆಡ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸುಮಾರು ಎರಡು ವರ್ಷದ ಹಿಂದೆ ಮಂಜೇಶ್ವರ ಗ್ರಾಹಕರ ವೇದಿಕೆಯ ನಿರಂತರ ಒತ್ತಾಯದಿಂದ ಕೇರಳ ನೀರು ಸರಬರಾಜು ಇಲಾಖೆಯ ವತಿಯಿಂದ ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲಾ ರಸ್ತೆ ಪಕ್ಕದಲ್ಲಿ ಒಂದು ಕೊಳವೆ ಬಾವಿಯನ್ನು ನಿರ್ಮಿಸಲಾಗಿತ್ತು. ಈ ಕೊಳವೆ ಬಾವಿಯಿಂದ ನೀರನ್ನು ಸರಬರಾಜು ಮಾಡುವಾಗ ಒತ್ತಡ ಕಂಡು ಬರುತ್ತಿರುವ ತೂಮಿನಾಡು ಕಾಲೊನಿ ಸೇರಿದಂತೆ ಸುಮಾರು 1400 ಕುಟುಂಬಕ್ಕೆ ನೀರನ್ನು ಯಾವುದೇ ಸಮಸ್ಯೆ ಇಲ್ಲದೆ ವಿತರಿಸಬಹುದಾಗಿ ಗ್ರಾಹಕರ ವೇದಿಕೆ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟಿತ್ತು. ಆದರೆ ಇದರ ಮುಂದುವರಿದ ಭಾಗವಾಗಿ ವಿದ್ಯುತ್ ಸಂಪರ್ಕವನ್ನು ನೀಡಲು ಸ್ಥಳೀಯ ವಾರ್ಡ್ ಸದಸ್ಯೆಯಾಗಲೀ, ಪಂಚಾಯತ್ ಆಗಲೀ ಯಾವುದೇ ಮುತುವರ್ಜಿ ವಹಿಸಿಲ್ಲವೆಂಬ ಆರೋಪ ಕಾಲೊನಿ ನಿವಾಸಿಗಳಿಂದ ಕೇಳಿಬರುತಿತ್ತು. ಈ ಹಿನ್ನೆಲೆಯಲ್ಲಿ ಈ ಕೊಳವೆ ಬಾವಿ ಹಾಗೆಯೇ ನೆನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕುಂಜತ್ತೂರು ಶಾಲಾ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ಕಾಸರಗೋಡು ಸಂಸದ ಪಿ ಕರುಣಾಕರನ್ ಇವರಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ ಊರಿನವರೊಂದಿಗೆ ಸೇರಿ ವಿಷಯವನ್ನು ಗಮನಕ್ಕೆ ತಂದಾಗ ಸಂತೋಷದಿಂದ ಒಪ್ಪಿಕೊಂಡ ಸಂಸದರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಂಪರ್ಕವಿಲ್ಲದೆ ನೆನೆಗುದಿಗೆ ಬಿದ್ದಿದ್ದ ಪಂಪ್ ಶೆಡ್ಡಿನ ಶೋಚನೀಯಾವಸ್ಥೆಯನ್ನು ನೋಡಿ ಘಟನಾ ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಕೂಡಲೇ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಿ ಕಾಲೊನಿ ನಿವಾಸಿಗಳಿಗೆ ನೀರಿನ ಸೌಕರ್ಯ ನೀಡುವಂತೆ ಆದೇಶಿಸಿದರು.

ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸಂಸದರ ಫಂಡಿನಿಂದ ಲಭಿಸಿದ ನಗದನ್ನು ವಿದ್ಯುತ್ ಇಲಾಖೆಗೆ ಪಾವತಿಸಿ ಗುರುವಾರ ಸಂಜೆ ಸಂಪರ್ಕವನ್ನು ನೀಡಿರುತ್ತಾರೆ. ಶುಕ್ರವಾರದಿಂದ ಈ ಕೊಳವೆ ಬಾವಿಯಿಂದ ನೀರು ಸರಬರಾಜು ಆರಂಭಗೊಂಡಿದೆ.