ರಾ ಹೆದ್ದಾರಿ 66ರಲ್ಲಿ ಶೀಘ್ರದಲ್ಲಿಯೇ ಟೋಲ್ ಸುಂಕ ಸಂಗ್ರಹ ಆರಂಭ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈಗಾಗಲೇ ಕಾರ್ಯಾರಂಭಕ್ಕೆ ಸಿದ್ಧವಾಗಿ ನಿಂತಿರುವ ಮೂರು  ಟೋಲ್ ಬೂತುಗಳು ಶೀಘ್ರದಲ್ಲಿಯೇ ಟೋಲ್ ಸಂಗ್ರಹ ಪ್ರಾರಂಭಿಸಲಿವೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೇರಳ ಗಡಿಯ ತಲಪಾಡಿಯಿಂದ ಕುಂದಾಪುರದುದ್ದಕ್ಕೂ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನ ಈ ಮೂರು ಕಡೆಗಳಲ್ಲಿ ಟೋಲ್ ಬೂತ್ ಈಗಾಗಲೇ ತಲೆ ಎತ್ತಿವೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಯು ಈಗಾಗಲೇ ಟೋಲ್ ಸಂಗ್ರಹ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ತಿಂಗಳ ಅಂತ್ಯಕ್ಕೆ ಟೋಲ್ ಸಂಗ್ರಹ ಆರಂಭವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯಕುಮಾರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿಯ ಕುಂದಾಪುರವರೆಗಿನ 90 ಕಿ ಮೀ ಅಂತರದ ಚತುಷ್ಪಥ ರಸ್ತೆ ಕೂಡ ಯೋಜನೆಗೆ ಒಳಗೊಂಡಿದೆ ಎಂದು ವಿಜಯಕುಮಾರ್ ವಿವರಿಸಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ನಂತೂರು ಜಂಕ್ಷನ್ನಿನಿಂದ ಸುರತ್ಕಲ್ ಎನ್ ಐ ಟಿ ಕೆ.ವರೆಗಿನ ರಸ್ತೆಯನ್ನು ಚತುಷ್ಪಥಕ್ಕೆ ಬದಲಾಯಿಸಲಾಗಿದ್ದು, ಇದು ಬಂದರು ಸಂಪರ್ಕ ಯೋಜನೆಯಡಿಯಲ್ಲಿದೆ. ಸುರತ್ಕಲಿನಿಂದ ಕುಂದಾಪುರವರೆಗಿನ ರಸ್ತೆಯನ್ನು ನವಯುಗ ಟೋಲ್ ರೋಡ್ ಕಂಪೆನಿ ಚತುಷ್ಪಥಕ್ಕೆ ಅಭಿವೃದ್ಧಿಪಡಿಸಿದೆ.

ನಂತೂರು ಜಂಕ್ಷನ್ನಿನಲ್ಲಿ ಇನ್ನೂ ಪ್ರಮುಖ ಕೆಲಸಗಳು ಪೂರ್ಣಗೊಳ್ಳದಿದ್ದರೂ ನಂತೂರು ಜಂಕ್ಷನ್ ಸುರತ್ಕಲವರೆಗಿನ ಟೋಲ್ ಸುಂಕ ಸಂಗ್ರಹಿಸುತ್ತಿದೆ.

ನಿಯಮದ ಪ್ರಕಾರ ಶೇಕಡಾ 75ರಷ್ಟು ಕೆಲಸ ಪೂರ್ಣಗೊಂಡಿದ್ದರೆ ನಾವು ಟೋಲ್ ಸುಂಕ ಸಂಗ್ರಹಿಸಬಹುದಾಗಿದೆ ಎಂದು ವಿಜಯಕುಮಾರ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಸಮರ್ಥಿಸಿದ್ದಾರೆ.