ಸ್ಥಳೀಯ ವಾಹನಗಳಿಗೂ ಶುಲ್ಕ ವಿರೋಧಿಸಿ ಸಾಸ್ತಾನದಲ್ಲಿ ಟೋಲ್ ಗೇಟ್ ಕಿತ್ತೆಸೆದರು

ಕುಂದಾಪುರ : ಸ್ಥಳೀಯ ವಾಹನಗಳಿಗೂ ಟೋಲ್ ಗೇಟಿನಲ್ಲಿ ಶುಲ್ಕ ವಸೂಲಾತಿಗೆ ಮುಂದಾಗಿರುವುದನ್ನು ಕಂಡ ಸಾರ್ವಜನಿಕರು ಏಕಾಏಕಿ ಸಿಡಿದೆದ್ದು, ಸಾಸ್ತಾನ ಟೋಲ್ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಸಂಜೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಟೋಲ್ ಕೇಂದ್ರಕ್ಕೆ ನುಗ್ಗಿ ಟೋಲ್ ಗೇಟುಗಳನ್ನು ಬಲವಂತವಾಗಿ ತೆರವುಗೊಳಿಸಿದರು.

ಟೋಲ್ ಕೇಂದ್ರದಿಂದ ಸುತ್ತಮುತ್ತಲಿನ 5 ಕಿ ಮೀ ವ್ಯಾಪ್ತಿಯವರೆಗೆ ಮಾತ್ರ ಟೋಲ್ ರಹಿತವಾಗಿ ಸಂಚರಿಸಬಹುದು. ಮಿಕ್ಕುಳಿದ ಕೆ ಎ 20 ನೋಂದಣಿಯ ಖಾಸಗಿ ವಾಹನಗಳು ಮಾಸಿಕ ಪಾಸ್ ಪಡೆಯಬೇಕು ಮತ್ತು ಉಳಿದ ಹಳದಿ ಫಲಕದ ವಾಹನಗಳು ಎಲ್ಲರಂತೆ ಟೋಲ್ ನೀಡಿ ತೆರಳಬೇಕು ಎಂದು ಸೂಚನೆಯನ್ನು ಇಲ್ಲಿನ ಸಿಬ್ಬಂದಿಗಳು ನೀಡುತ್ತಿದ್ದರು. ಆದರೆ ಇದು ಸರಿಯಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಎಚ್ಚರಿಕೆ ನೀಡಲು ತೆರಳಿದ ಸಂದರ್ಭ ಸ್ಥಳೀಯ ವಾಹನಗಳಿಗೂ ಶುಲ್ಕವನ್ನು ವಸೂಲು ಮಾಡುತ್ತಿರುವುದು ಇವರ ಗಮನಕ್ಕೆ ಬಂದಿದೆ.

ಇದರಿಂದ ಆಕ್ರೋಶಗೊಂಡ ಸಮಿತಿ ಸದಸ್ಯರು ಟೋಲ್ ಕೇಂದ್ರದ ಗೇಟುಗಳನ್ನು ಬಲವಂತವಾಗಿ ಪಕ್ಕಕ್ಕೆ ಸರಿಸಿ ಟೋಲ್ ಸಂಗ್ರಹಿಸಬಾರದು ಎಂದು ಪ್ರತಿಭಟಿಸಿದರು. ಅಲ್ಲದೆ ಈ ಸಂದರ್ಭ ಬಂದ ಎಲ್ಲಾ ವಾಹನಗಳನ್ನೂ ಟೋಲ್ ಸಂಗ್ರಹ ಮಾಡದೇ ಕಳುಹಿಸಿಕೊಟ್ಟರು. ಈ ವೇಳೆ ಆಕ್ರೋಶಗೊಂಡ ಟೋಲ್ ಸಿಬ್ಬಂದಿಗಳು ಸಮಿತಿ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು.

“ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆಯೇ ಇಲ್ಲವೇ ? ಹೈಕೋರ್ಟ್ ನೀಡಿರುವ ಆದೇಶಕ್ಕೆ ಬೆಲೆಯೇ ಇಲ್ಲವೇ ?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಟೋಲ್ ಕೇಂದ್ರದ ವ್ಯವಸ್ಥಾಪಕನನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಟೋಲ್ ಕೇಂದ್ರದ ಸಿಬ್ಬಂದಿಯೋರ್ವ ಪ್ರತಿಭಟನಾಕಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಉದ್ರಿಕ್ತರಾದ ಎರಡೂ ತಂಡದ ನಡುವೆ ಹೊಯ್‍ಕೈ ಹಂತಕ್ಕೂ ತಲುಪಿದೆ.

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಬಂದ ನವಯುಗ ಸಂಸ್ಥೆಯ ಎಂಜಿನಿಯರ್ ರಾಘವೇಂದ್ರ ಪ್ರತಿಭಟನಾಕಾರ ಜೊತೆಗೆ ಮಾತುಕತೆ ನಡೆಸಿದರು. ಎಂಜಿನಿಯರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, “ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಏನು ನಿರ್ಧಾರವಾಗಿದೆಯೋ ಅದು ಜಾರಿಗೆ ಬರುತ್ತಿಲ್ಲ. ಕಾಮಾಗಾರಿ ಸಂಪೂರ್ಣಗೊಳ್ಳುವವರೆಗೆ ಕೆಎ 20 ನೋಂದಣಿಯ ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ನಿರ್ಧಾರವಾಗಿತ್ತು ಇದರ ಜಾರಿ ನಡೆಯುತ್ತಿಲ್ಲ” ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಎಂಜಿನಿಯರ್ ರಾಘವೇಂದ್ರ  ಸ್ಥಳೀಯ 5 ಕಿ ಮಿ ವ್ಯಾಪ್ತಿಯ ವಾಹನಗಳಿಗೆ ಪೂರ್ಣ ಪ್ರಮಾಣದ ವಿನಾಯಿತಿ ಮತ್ತು ಕೆ ಎ 20 ನೋಂದಣಿಯ ಖಾಸಗಿ ವಾಹನಗಳಿಗೆ ವಿನಾಯಿತಿ ನೀಡುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು. ನಂತರ ಎಂಜಿನಿಯರ್ ಮತ್ತು ಪ್ರತಿಭಟನಾಕಾರರ ನಡುವೆ ಮಾತುಕತೆ ನಡೆದು ಯಥಾ ಸ್ಥಿತಿ ಕಾಪಾಡುವುದಾಗಿ ಎಂಜಿನಿಯರ್ ರಾಘವೇಂದ್ರ ತಿಳಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.