ಶೌಚಾಲಯವನ್ನೇ ಗೋಡೌನ್ ಮಾಡಿಕೊಂಡ ಮಾರ್ಕೆಟ್ ಮಂದಿ

ನಮ್ಮ ಪ್ರತಿನಿಧೀ ವರದಿ

ಮಂಗಳೂರು : ಮಂಗಳೂರು ಮೇಯರ್ ತಮ್ಮ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಿದ್ದಾರೆ. ಬುಧವಾರದಂದು ಏಕಾಏಕಿ ಸೆಂಟ್ರಲ್ ಮಾರುಕಟ್ಟೆ ಪ್ರದೇಶಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದ ಮೇಯರ್ ಅಲ್ಲಿ ವ್ಯಾಪಾರಿಗಳು ಅಂಗಡಿ ಕೋಣೆಯನ್ನು ಬಾಡಿಗೆಗೆ ಪಡೆದುಕೊಂಡು ಶೌಚಾಲಯದ ಕೊಠಡಿಗಳನ್ನು ಆಕ್ರಮಣ ಮಾಡಿಕೊಂಡು ಗೋಡೌನ್ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಸೆಂಟ್ರಲ್ ಮಾರ್ಕೆಟಿನಲ್ಲಿರುವ ಪಾಲಿಕೆಯ ಕಟ್ಟಡದಲ್ಲಿರುವ ಎರಡು ಅಕ್ರಮ ಕೊಠಡಿಗಳನ್ನು ಸಾರ್ವಜನಿಕ ದೂರಿನ ಮೇರೆಗೆ ದಾಳಿ ಮಾಡಿ ಮರಳಿ ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡು ಮಹಡಿಗಳನ್ನು ಹೊಂದಿರುವ ಪಾಲಿಕೆ ಕಟ್ಟಡದಲ್ಲಿ ಮೂರು ಶೌಚಗೃಹಗಳಿದ್ದವು. ಆದರೆ ಇದೀಗ ನೆಲ ಅಂತಸ್ತಿನಲ್ಲಿರುವ ಒಂದು ಶೌಚಾಲಯ ಬಿಟ್ಟರೆ ಉಳಿದ ಎರಡು ಮಹಡಿಯಲ್ಲಿನ ಶೌಚ ಕೊಠಡಿಯನ್ನು ಆ ಕಟ್ಟಡದಲ್ಲೇ ನೆಲೆಸಿರುವ ವ್ಯಾಪಾರಿಗಳಿಬ್ಬರು ಆಕ್ರಮಿಸಿಕೊಂಡುಬಿಟ್ಟಿದ್ದಾರೆ. ಇಷ್ಟೇ ಅಲ್ಲದೆ ಅದರ ಶೌಚ ಗುಂಡಿಗಳನ್ನು ಸಿಮೆಂಟ್ ಹಾಕಿ ಮುಚ್ಚಿಬಿಟ್ಟಿದ್ದಾರೆ. ಪ್ರತ್ಯೇಕವಾದ ಗೋಡೆಯನ್ನೂ ನಿರ್ಮಿಸಿ ಅಕ್ರಮವನ್ನು ಸಕ್ರಮ ಮಾಡಿಕೊಂಡಿದ್ದಾರೆ !

ವ್ಯಾಪಾರಿಗಳು ಶೌಚಾಲಯಗಳನ್ನು ತೆರವುಗೊಳಿಸಿ ಅಲ್ಲಿ ತಮ್ಮ ಸಾಮಾನು ಸರಂಜಾಮುಗಳನ್ನು ಶೇಖರಿಸಿಟ್ಟಿದ್ದಾರೆ. ಇದೇ ವೇಳೆ ಶೌಚಾಲಯದ ಕೊಠಡಿಯನ್ನು ಅತಿಕ್ರಮಿಸಿ ದಾಸ್ತಾನು ಕೋಣೆಯನ್ನಾಗಿಸಿದ ವ್ಯಾಪಾರಿಯೊಬ್ಬ ತಾನು ಈ ಕೊಠಡಿಗಾಗಿ ಪಾಲಿಕೆಯಿಂದ ಅನುಮತಿ ಪಡೆದಿದ್ದೇನೆ ಎಂದು ಅನುಮತಿ ಪತ್ರ ತೋರಿಸಿ ಮೇಯರ್ ಸಹಿತ ಅಧಿಕಾರಿಗಳನ್ನು ಒಂದು ಕ್ಷಣ ದಂಗುಬಡಿಸಲು ಯತ್ನಿಸಿದ್ದಾನೆ.

ಆದರೆ ಪಾಲಿಕೆ ಆಯುಕ್ತ ನಝೀರ್ ಅವರು ಪ್ರತಿಯನ್ನು ಪಡೆದುಕೊಂಡು ಸರಿಯಾಗಿ ಪರಿಶೀಲನೆ ನಡೆಸಿದಾಗ, ಅದು ಕೇವಲ ಪಾಲಿಕೆಗೆ ಅನುಮತಿ ಕೋರಿ ಪಡೆದ ಪತ್ರವಾಗಿರುವುದು ಬೆಳಕಿಗೆ ಬಂದಿದೆ. ಆ ಪತ್ರ ಅನುಮತಿ ಪತ್ರವಲ್ಲ ಎಂದು ಸಾಬೀತಾಗುತ್ತಿದ್ದಂತೆ ಗರಂ ಆದ ಮೇಯರ್ ಇಬ್ಬರು ವ್ಯಾಪಾರಿಗಳ ವಿರುದ್ಧ ಕೇಸು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಅಂಗಡಿ ಬಾಡಿಗೆಗೆ ಪಡೆದುಕೊಂಡಿದ್ದ ಆರೋಪಿಯೂ ತನ್ನನು ತಾನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ. ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.