ಅವನಿಗೆ ನಾನಿಷ್ಟ ; ನನಗೆ ಅವನ ತಮ್ಮನ ಮೇಲೆ ಕ್ರಶ್

ಪ್ರ : ನಾನೀಗ ಪಿಯುಸಿಯಲ್ಲಿ ಓದುತ್ತಿದ್ದೇನೆ. ನಾವಿರುವುದು ಬಾಡಿಗೆ ಮನೆಯಲ್ಲಿ. ನಮ್ಮ ಕಂಪೌಂಡಿನಲ್ಲೇ ಇರುವ ಇನ್ನೊಂದು ಮನೆಯವರ ಜೊತೆ ನಮಗೆ ಒಳ್ಳೆಯ ಸ್ನೇಹವಿದೆ. ಅವರಿಗೆ ಇಬ್ಬರು ಗಂಡುಮಕ್ಕಳು. ಅವರಿಬ್ಬರ ನಡುವೆ ಒಂದೇ ವರ್ಷ ವ್ಯತ್ಯಾಸ. ಇಬ್ಬರೂ ಡಿಗ್ರಿ ಓದುತ್ತಿದ್ದಾರೆ. ಅವರಲ್ಲಿ ಅಣ್ಣ ತುಂಬಾ ಸ್ಟೂಡಿಯಸ್. ನನಗೆ ಓದಿನಲ್ಲಿ ಏನೇ ಡೌಟ್ ಇದ್ದರೂ ಅವನ ಹತ್ತಿರ ಕೇಳುತ್ತೇನೆ. ನನಗೆ ಅವನೆಂದರೆ ಒಂದು ರೀತಿಯ ಗೌರವ ಭಾವನೆ ಇದೆ. ಆದರೆ ಅವನು ನನ್ನನ್ನು ಇಷ್ಟಪಡುತ್ತಿದ್ದಾನೆ. ಕಳೆದ ತಿಂಗಳು ನಡೆದ ನನ್ನ ಬರ್ತ್‍ಡೇ ದಿನ ಅವನು ತನ್ನ ರೂಮಿಗೆ ಕರೆದುಕೊಂಡು ಹೋಗಿ ನನಗೆ ಸರ್‍ಪ್ರೈಸಾಗಿ ತಾಜ್‍ಮಹಲ್ಲಿನ ಪ್ರತಿಕೃತಿ ನೀಡಿ `ಐ ಲವ್ ಯೂ’ ಅಂತಂದ. ನನಗೆ ಏನು ಹೇಳಬೇಕೆಂದೇ ತೋಚದೇ ಹಾಗೇ ಹಿಂದಿರುಗಿದೆ. ನನಗೆ ಅವನ ಮೇಲೆ ಅಂತಹ ಭಾವನೆ ಯಾವುದೂ ಇಲ್ಲ. ನನ್ನ ಹೃದಯದ ಬಡಿತ ಹೆಚ್ಚಾಗುವುದು ಅವನ ತಮ್ಮನನ್ನು ನೋಡಿದಾಗ. ಅವನು ತುಂಬಾ ಕಿಲಾಡಿ. ಯಾವಾಗ ನೋಡಿದರೂ ಗೆಳೆಯರ ಗುಂಪು ಕಟ್ಟಿಕೊಂಡು ಕ್ರಿಕೆಟ್ ಆಟವಾಡುತ್ತಿರುತ್ತಾನೆ. ಕಾಲೇಜಿನಲ್ಲಿ ಓದುತ್ತಿದ್ದರೂ ಅವನಿಗೆ ಸೀರಿಯಸ್‍ನೆಸ್ ಇಲ್ಲ. ಯಾವಾಗಲೂ ಹರಡಿದ ತಲೆಕೂದಲಿನಲ್ಲಿ ಹೇಗೇಗೋ ಇರುತ್ತಾನೆ. ನನ್ನ ಜಡೆಹಿಡಿದು ಎಳೆಯುತ್ತಾ ನನ್ನನ್ನು ರೇಗಿಸುವುದೆಂದರೆ ಅವನಿಗೆ ಭಾರೀ ಖುಶಿ. ಆದರೂ ನನಗೆ ಅವನ ಆ ತುಂಟತನ ಇಷ್ಟವಾಗುತ್ತದೆ. ಹಾರುತ್ತಾ ಕುಣಿಯುತ್ತಾ ಜೀವನವನ್ನು ಎಂಜಾಯ್ ಮಾಡುವ ಅವನನ್ನು ನೋಡುತ್ತಾ ಕೂರಲು ಮನಸ್ಸು ಬಯಸುತ್ತದೆ. ಅವನಿಗೆ ನನ್ನ ಮೇಲೆ ಯಾವ ಭಾವನೆ ಇದೆಯೆಂದು ಅರ್ಥವಾಗುತ್ತಿಲ್ಲ. ನನ್ನ ಪ್ರೀತಿಯನ್ನು ಅವನಿಗೆ ತಿಳಿಸಬೇಕೋ ಬೇಡವೋ ಅಂತಲೇ ಗೊತ್ತಾಗುತ್ತಿಲ್ಲ. ಅವನ ಅಣ್ಣ ನನ್ನ ಉತ್ತರದ ನಿರೀಕ್ಷೆಯಲ್ಲಿ ಇದ್ದಾನೆ. ಇಬ್ಬರ ನಡುವೆ ಯಾರನ್ನು ಆರಿಸಲಿ?

ಉ : ಈ ವಯಸಿನಲ್ಲಿ ಸ್ವಲ್ಪ ಹಾಗೇ. ಬಿಂದಾಸಾಗಿರುವ ಹುಡುಗರ ಮೇಲೇ ಕ್ರಶ್ಶಾಗುವುದು ಜಾಸ್ತಿ. ಅಂಥವರೇ ಹೀರೋಗಳಾಗಿ ಕಾಣಿಸುತ್ತಾರೆ. ಯಾವಾಗಲೂ ಪುಸ್ತಕ ಹಿಡಿದು ಕೂರುವ ಹುಡುಗ ಗಾಂಧೀಯಾಗಿ ಕಾಣುತ್ತಾರೆ. ನಿಮಗೂ ಈಗ ಹಾಗೇ ಅನಿಸಿದೆ. ಹಿರಿಯವನು ನಿಮ್ಮನ್ನು ಇಷ್ಟಪಟ್ಟರೂ ಅವನು ನಿಮಗೆ ಅಭ್ಯಾಸದಲ್ಲಿ ಸಹಾಯ ಮಾಡಿದರೂ ನಿಮ್ಮ ಮನಸ್ಸು ಅವನ ತಮ್ಮನ ಹ್ಯಾಪಿ-ಗೋ-ಲಕ್ಕಿ ಗುಣಕ್ಕೇ ಮಾರು ಹೋಗಿದೆ. ಆದರೆ ನೀವೀಗ ಯಾವ ನಿರ್ಧಾರ ಕೈಗೊಳ್ಳಲೂ ತುಂಬಾ ಚಿಕ್ಕವರು. ಇನ್ನೂ ಮೇಜರ್ ಕೂಡಾ ಆಗಿಲ್ಲ. ಪ್ರೀತಿ-ಪ್ರೇಮ ಅಂತ ಈಗ ಅದರ ಕಡೆಗೇ ಮನಸ್ಸು ಹೋದರೆ ಸ್ಟಡಿ ಹಿಂದೆ ಬೀಳುತ್ತದೆ. ಆದ್ದರಿಂದ ಈಗ ನಿಮಗೆ ಆ ಹುಡುಗನ ಮೇಲೆ ಅಂತಹ ಯಾವುದೇ ಭಾವನೆ ಇಲ್ಲ ಅಂತ ನಿಮ್ಮನ್ನು ಇಷ್ಟಪಡುತ್ತಿದ್ದ ಹುಡುಗನಿಗೆ ಮೊದಲು ಹೇಳಿ. ನೀವು ಅವನನ್ನು ಅಣ್ಣನ ಸ್ಥಾನದಲ್ಲಿ ನೊಡುತ್ತಿದ್ದೀರಿ ಅಂತಲೂ ಹೇಳಿ ಮೊದಲು ಅವನಿಗಿರುವ ಭ್ರಮೆ ದೂರವಾಗುವಂತೆ ಮಾಡಿ. ಹಾಗಂತ ಈಗಲೇ ನಿಮ್ಮ ಮನಸ್ಸಿನ ಭಾವನೆಯನ್ನು ಅವನ ತಮ್ಮನಿಗೂ ಹೇಳಲು ಹೋಗದಿರಿ. ಎರಡು-ಮೂರು ವರ್ಷ ಕಳೆಯಲಿ. ಆಗ ಅಣ್ಣನೂ ತನ್ನ ದಾರಿ ನೋಡಿಕೊಂಡಿರುತ್ತಾನೆ. ನಿಮ್ಮ ಮನಸ್ಸಿನ ಭಾವನೆಯೂ ನಿಮಗೆ ಸ್ಪಷ್ಟವಾಗಬಹುದು. ನೀವು ಇಷ್ಟಪಡುತ್ತಿರುವ ಹುಡುಗನೂ ಆಗ ಸ್ವಲ್ಪ ಗಂಭೀರವಾಗಬಹುದು. ಅವನಿಗೂ ನಿಮ್ಮ ಮೇಲೆ ಯಾವ ಭಾವನೆ ಇರಬಹುದು ಅನ್ನುವುದೂ ಗೊತ್ತಾಗಬಹುದು. ಈಗ ನೀವು ಯಾವ ಬಂಧನಕ್ಕೂ ಒಳಗಾಗದೇ ಹಾಯಾಗಿರುವುದೇ ಕ್ಷೇಮ.