ತಮಿಳುನಾಡಿನ `ವಾಲೆ ಬೆಲ್ಲ’ಕ್ಕೆ ಇಲ್ಲಿ ಭಾರೀ ಬೇಡಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇದೀಗ ನಗರ ಪ್ರದೇಶ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಳೇ ಮರದ ಎಲೆಗಳ ಬುಟ್ಟಿಗಳಲ್ಲಿ ವಾಲೆ ಬೆಲ್ಲ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ತಮಿಳುನಾಡು ತಿರುನ್ವೇಲಿಯ ವ್ಯಾಪಾರಿಗಳು ಪ್ರಮುಖವಾಗಿ ಹೆದ್ದಾರಿಯ ನಂತೂರು, ತೊಕ್ಕೊಟ್ಟು, ಪಂಪ್ವೆಲ್, ಬಿ ಸಿ ರೋಡು, ಮಂಗಳೂರಿನ ನಂದಿಗುಡ್ಡಗಳಲ್ಲಿ ಕಂಡು ಬರುತ್ತಿದ್ದಾರೆ.

“ನಾವು ನಮ್ಮ ಮನೆಯಲ್ಲೇ ತಯಾರಿಸಿದ ವಾಲೆ ಬೆಲ್ಲವನ್ನು ಮಾರಾಟ ಮಾಡಲೆಂದು ತಂಡದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬಂದಿದ್ದೇವೆ. ಸುಮಾರು 16 ಮಂದಿಯ ತಂಡದೊಂದಿಗೆ ನಾವು ತಿರುನ್ವೇಲಿಯಿಂದ ಬಂದಿದ್ದೇವೆ” ಎನ್ನುತ್ತಾರೆ ವ್ಯಾಪಾರಿ ಗಣೇಶನ್.

“ಮಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಾವು ಸುಮಾರು 1000 ಕೇಜಿಗೂ ಹೆಚ್ಚಿನ ವಾಲೆ ಬೆಲ್ಲವನ್ನು ಮಾರಾಟ ಮಾಡಿದ್ದೇವೆ. ತಮಿಳುನಾಡಿನಲ್ಲಿ ಪೊಂಗಲ್ ಉತ್ಸವದ ಸಂದರ್ಭದಲ್ಲಿ ಈ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ ಇದೆ” ಎನ್ನುತ್ತಾರವರು.

“ಸಾಂಪ್ರದಾಯಿಕವಾದ ರೀತಿಯಲ್ಲಿ ಈ ವಾಲೆಬೆಲ್ಲವನ್ನು ತಯಾರಿಸಲಾಗುತ್ತಿದೆ. ಯಾವುದೇ ಕಲಬೆರಕೆ ಇಲ್ಲ. ಇದಕ್ಕೆ ಪೂರ್ವ ತಯಾರಿ ಕೂಡಾ ಸಾಕಷ್ಟು ಮಾಡಬೇಕಾಗುತ್ತದೆ. ತಾಳೆ ಮರದಿಂದ ಪರಿಶುದ್ದವಾದ ಸಿಹಿ ರಸವನ್ನು ತೆಗೆದ ಬಳಿಕ ಅದನ್ನು ದೊಡ್ಡ ಮಣ್ಣಿನ ಮಡಕೆಗಳಲ್ಲಿ ಹಾಕಿ ಕುದಿಸಿ ಆರಿದ ಬಳಿಕ ಅದಕ್ಕೊಂದಿಷ್ಟು ತೆಂಗಿನ ತುರಿಯನ್ನು ಬೆರೆಸಿ ಒಣಗಿಸುತ್ತೇವೆ. ಸುಮಾರು 2000 ಕೇಜಿ ವಾಲೆ ಬೆಲ್ಲದೊಂದಿಗೆ ಇಲ್ಲಿಗೆ ಬಂದಿದ್ದೇವೆ” ಎನ್ನುತ್ತಾರೆ ಗಣೇಶನ್.

“ಈ ಬೆಲ್ಲವನ್ನು ತಯಾರಿಸುವುದು ನಮ್ಮ ವೃತ್ತಿಯಾಗಿದೆ. ಇದೇ ನಮ್ಮ ಜೀವನಾಧಾರ ಕೂಡಾ. ನಮ್ಮ ಮನೆಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತೇವೆ. ಬಳಿಕ ಚಿಕ್ಕ ಟ್ರಕ್ಕುಗಳಲ್ಲಿ ದೇಶದ ವಿವಿಧ ಕಡೆಗಳಿಗೆ ಕೊಂಡು ಹೋಗುತ್ತೇವೆ. ಸದ್ಯ ಮಂಗಳೂರಿನಲ್ಲಿದ್ದು, ಮುಂದಿನ ದಿನಗಳಲ್ಲಿ ಮೈಸೂರು, ಬೆಂಗಳೂರು, ಹೊಸೂರುಗಳಿಗೆ ತೆರಳಲಿದ್ದೇವೆ” ಎಂದು ತಿಳಿಸಿದರು.

“ಇದರ ಜೊತೆಗೆ ನಾವು `ಶುಂಠಿ ಬೆಲ್ಲ’ವನ್ನು ಕೂಡಾ ಮಾರಾಟ ಮಾಡುತ್ತೇವೆ. ಇದಕ್ಕೆ ಏಲಕ್ಕಿ ಮತ್ತು ಮೆಣಸು ಹುಡಿ ಮಾಡಿ ಹಾಕುತ್ತೇವೆ. ಇದರ ಬೆಲೆ ಸಾಮಾನ್ಯ ಬೆಲ್ಲ(120 ರೂ.)ಕ್ಕಿಂತ ಹೆಚ್ಚು 220 ರೂ.ಇದೆ. ಈ ಬೆಲ್ಲವನ್ನು ಹೆಚ್ಚಾಗಿ ಗರ್ಭಿಣಿ ಸ್ತ್ರೀಯರು ತಮ್ಮ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಅಲ್ಲದೆ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲೂ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ”  ಎಂದು ಹೇಳುತ್ತಾರವರು.