ತಿವಾರಿ ದೊಡ್ಡ ಹಗರಣ ಎಕ್ಸಪೋಸ್ ಮಾಡಲಿದ್ದರು ಎಂದ ಯು ಪಿ ಸಚಿವ

ಹಗರಣದ ಬಗ್ಗೆ ನನಗೆ ತಿಳಿಸಿಲ್ಲ : ಖಾದರ್

ಲಕ್ನೋ : ಇಲ್ಲಿನ ಹಜರತ್ ಗಂಜ್ ಪ್ರದೇಶದಲ್ಲಿ ತಮ್ಮ ಜನ್ಮದಿನವಾದ ಮೇ 17ರಂದೇ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕರ್ನಾಟಕ ಕೇಡರ್ 2007ರ ಐಎಎಸ್ ಅಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತ ಅನುರಾಗ್ ತಿವಾರಿ ಅವರು ತಮ್ಮ ಇಲಾಖೆಯಲ್ಲಿನ ಬಹುಕೋಟಿ ಹಗರಣವೊಂದನ್ನು ಬಹಿರಂಗ ಪಡಿಸಲಿದ್ದರು ಎಂದು ಉತ್ತರ ಪ್ರದೇಶ ಸಚಿವ ಸುರೇಶ್ ಕುಮಾರ್ ಖನ್ನಾ ರಾಜ್ಯದ ವಿಧಾನಸಭೆಯಲ್ಲಿ ತಿಳಿಸಿದ್ದರೂ ತಿವಾರಿ ಅವರು ಇಲಾಖೆಯ ಯಾವುದೇ ಹಗರಣವನ್ನು ತಮ್ಮ ಗಮನಕ್ಕೆ ತಂದಿರಲಿಲ್ಲ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್ ಬೆಂಗಳೂರಿನಲ್ಲಿ ಹೇಳಿಕೊಂಡಿದ್ದಾರೆ.

“ತಿವಾರಿಯವರು  ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಸ್ತುವಾರಿಯೂ ಆಗಿದ್ದರು. ಯಾವುದೇ ಹಗರಣವಿದ್ದರೂ ಅವರು ಅದನ್ನು ನನ್ನ ಗಮನಕ್ಕೆ ತರುತ್ತಿದ್ದರು”ಎಂದು ಖಾದರ್ ಹೇಳಿದ್ದಾರೆ.

ಅನುರಾಗ್ ತಿವಾರಿ ಅವರು ರೂ 2000 ಕೋಟಿಯಷ್ಟು ಅವ್ಯವಹಾರ ನಡೆದಿರಬಹುದಾದ  ದೊಡ್ಡ ಹಗರಣವೊಂದನ್ನು ಬಹಿರಂಗಪಡಿಸಲಿದ್ದರು ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಕರ್ನಾಟಕದಲ್ಲಿ ಗುರಿಯಾಗಿಸಲಾಗುತ್ತಿದೆ ಎಂದು ಅವರ  ಸಹೋದರ ಮಾಯಾಂಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಖಾದರ್ ಮೇಲಿನಂತೆ ಹೇಳಿದ್ದಾರೆ. ತಿವಾರಿ ಕುಟುಂಬವೂ ಅವರ ಸಾವಿನ ಹಿಂದೆ  ಕಾಣದ ಕೈಗಳ ಕೈವಾಡವಿರಬಹುದೆಂದು ಶಂಕಿಸಿದೆ.

ಯಾವುದೇ  ಅಧಿಕೃತ ಪತ್ರ ವ್ಯವಹಾಗಳಲ್ಲೂ ಹಗರಣದ ಬಗ್ಗೆ ತಿವಾರಿ ಉಲ್ಲೇಖಿಸಿಲ್ಲ ಹಾಗೂ ಆಗಾಗ ರಜೆಯ ಮೇಲೆ ಹೋಗುತ್ತಿದ್ದರು ಎಂದು  ಆಹಾರ ಇಲಾಖೆ ಮೂಲಗಳು ಹೇಳಿವೆ.