ಆನೆಗೆ ಹಿಂಸೆ : ತಿರುವಾಂಕೂರು ದೇವಸ್ವಂ ಮಂಡಳಿಗೆ ನೋಟಿಸು

ಅಳಪುರಂ : ದೇವಸ್ಥಾನದ ಆನೆ ಮುಲ್ಲಕ್ಕಲ್ ಬಾಲಕೃಷ್ಣನಿಗೆ ಹಿಂಸೆ ನೀಡಿದ ಮಾವುತರು ಮತ್ತು ತಿರುವಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ವನ್ಯಜೀವಿ ರಕ್ಷಣೆ ಕಾಯ್ದೆಯನ್ವಯ ಅರಣ್ಯಗಳ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ಜಾಮೀನುರಹಿತ ಆರೋಪ ಇರುವ ನೋಟಿಸು ಜಾರಿ ಮಾಡಿದ್ದಾರೆ. 2015ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೊಂದರನ್ವಯ ಪ್ರಾಣಿ ಹಿಂಸೆ ನೀಡಿದ ದೇವಸ್ವಂ ಅಧಿಕಾರಿಗಳು ಅಥವಾ ಆನೆ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿದೆ ಎಂದು ಚೆರ್ತಲಾದ ಜ್ಯುಡೀಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಸಲ್ಲಿಸಲಾಗಿರುವ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ಸೂಕ್ತ ಭದ್ರತೆ ಇಲ್ಲದೆ ರಾತೋರಾತ್ರಿ ಆನೆ ಸಾಗಾಟ ಮಾಡಿದ ಎಲ್ಲರ ವಿರುದ್ಧ ಆರೋಪ ಹೊರಿಸಲಾಗುತ್ತದೆ” ಎಂದು ಎಸಿಎಫ್ ಸುಮಿ ಜೋಸೆಫ್ ನಿನ್ನೆ ತಿಳಿಸಿದರು.