ಗಂಡನ ಚಿಲ್ಲರೆ ಬುದ್ಧಿಯಿಂದ ರೋಸಿಹೋಗಿದ್ದೇನೆ

ಪ್ರ : ನಾನು ಒಂದು ಸರಕಾರೀ ಕಚೇರಿಯಲ್ಲಿ ಉದ್ಯೋಗಿಯಾಗಿದ್ದೇನೆ. ನನ್ನ ಮದುವೆಯಾಗಿ ಈಗ ಆರು ವರ್ಷಗಳಾಗಿವೆ. ಒಬ್ಬ ಮಗನಿದ್ದಾನೆ. ಗಂಡ ಬಿಸಿನೆಸ್ ಮಾಡುತ್ತಿದ್ದಾರೆ. ಅವರ ಬಿಸಿನೆಸ್ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಅಂತ ಹೇಳಿದ್ದರಿಂದ ನನ್ನನ್ನು ಅವರಿಗೆ ಮದುವೆ ಮಾಡಿ ಕೊಟ್ಟಿದ್ದು. ಆದರೆ ಅವರಿಗೆ ವ್ಯಾಪಾರದಿಂದ ಹೇಳಿಕೊಳ್ಳುವಂತಹ ಇನ್‍ಕಮ್ ಬರುತ್ತಿರಲಿಲ್ಲ. ನನಗೂ ಸಂಬಳ ಬರುತ್ತಿದ್ದರಿಂದ ಸಂಸಾರ ನಡೆದುಕೊಂಡು ಹೋಗುತ್ತಿದೆ. ಅವರು ತುಂಬಾ ಆಲಸಿ. ಅದಕ್ಕಾಗಿಯೇ ಅವರು ಬಿಸಿನೆಸ್ಸಿನಲ್ಲಿ ಇನ್ನೂ ಮೇಲೆ ಬಂದಿಲ್ಲ. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿ ಸಂಪಾದನೆಯನ್ನೂ ಚೆನ್ನಾಗಿ ಮಾಡಬಹುದಲ್ಲಾ ಅಂತ ನಾನು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಅದರ ಬದಲಾಗಿ `ನೀನು ದುಡಿಯುತ್ತಿದ್ದೀ ಅಂತ ನಿನಗೆ ಅಹಂಕಾರ, ನನಗೆ ಬುದ್ಧಿ ಹೇಳಲು ಬರಬೇಡ’ ಅಂತ ನನ್ನನ್ನೇ ಮೂದಲಿಸುತ್ತಾರೆ. ಮೂರು ತಿಂಗಳ ಹಿಂದೆ ನನಗೆ ಪ್ರಮೋಶನ್ ಸಿಕ್ಕಿದೆ. ಜವಾಬ್ದಾರಿಯೂ ಜಾಸ್ತಿ ಇರುವುದರಿಂದ ಮನೆಗೆ ಬರುವುದು ಈಗೀಗ ತಡವಾಗುತ್ತಿದೆ. ಅದೂ ಅಲ್ಲದೇ ಉಳಿದವರ ಹತ್ತಿರ ಕೆಲಸ ಮಾಡಿಸಬೇಕಿರುವುದರಿಂದ ಎಲ್ಲರ ಜೊತೆ ಮಾತಾಡಲೇ ಬೇಕಾಗುತ್ತದೆ. ಮನೆಗೆ ಬಂದರೂ ಕೆಲವೊಮ್ಮೆ ಫೋನಿನಲ್ಲಿ ಸಲಹೆ ಸೂಚನೆ ಕೂಡಾ ಕೊಡಬೇಕಾಗುತ್ತದೆ. ಅದೆಲ್ಲ ನನ್ನ ಗಂಡನಿಗೆ ಅರ್ಥವೇ ಆಗುತ್ತಿಲ್ಲ. ಬದಲಾಗಿ ನನ್ನನ್ನೇ ಸಂಶಯದಿಂದ ನೋಡುತ್ತಾರೆ. ನನ್ನ ಮೊಬೈಲನ್ನು ನಾನು ಆಕಡೆ ಈಕಡೆ ಇದ್ದಾಗ ಚೆಕ್ ಮಾಡುತ್ತಾರೆ. ಸಂಜೆಯ ಹೊತ್ತು ನಮ್ಮ ಆಫೀಸಿನ ಹತ್ತಿರ ಬಂದು ನಾನು ಯಾರ ಜೊತೆ ಮಾತಾಡುತ್ತೇನೆ ಅಂತ ಸೂಕ್ಷ್ಮವಾಗಿ ಗಮನಿಸುವ ವಿಷಯವೂ ನನಗೆ ಗೊತ್ತಾಗಿದೆ. ಆಫೀಸಿನ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ನಾನು ಆಗಾಗ ಹೋಗಬೇಕಾಗುತ್ತದೆ. ಫಂಕ್ಷನ್ ಇದ್ದಾಗ ಸ್ವಲ್ಪ ಚೆನ್ನಾಗಿ ಡ್ರೆಸ್ ಮಾಡಿಕೊಂಡರೂ `ಯಾರನ್ನು ಬಲೆಗೆ ಕೆಡವಲು ಈ ರೀತಿ ಅಲಂಕಾರ?’ ಅಂತ ಕೆಟ್ಟದಾಗಿ ಕೇಳುತ್ತಾರೆ. ಅವರ ಈ ಚಿಲ್ಲರೆ ಬುದ್ಧಿಯಿಂದಾಗಿ ರೋಸಿಹೋಗಿದ್ದೇನೆ. ಹೇಗೆ ಇದರಿಂದ ಮುಕ್ತಿ ಪಡೆಯಲಿ?

: ನಮ್ಮ ದೇಶ ಎಷ್ಟೇ ಮುಂದುವರಿದಿದೆ ಅಂದುಕೊಂಡರೂ ಇನ್ನೂ ನಮ್ಮದು ಪುರುಷಪ್ರಧಾನ ಸಮಾಜವೇ. ತಮ್ಮ ಸಂಗಾತಿ ತಮಗೆ ಸರಿಸಮಾನಳು ಅಂತ ತಿಳಿದುಕೊಳ್ಳುವ ಮಂದಿ ತುಂಬಾ ಕಡಿಮೆ. ಗಂಡನ ಶ್ರೇಯಸ್ಸನ್ನು ಹೆಂಡತಿಯಾದವಳು ಮುಕ್ತಮನಸ್ಸಿನಿಂದ ಸ್ವಾಗತಿಸುವ ರೀತಿಯಲ್ಲಿ ಹೆಂಡತಿಯ ಪ್ರಗತಿಯನ್ನು ಗಂಡ ಸಹಿಸುವುದು ಕಡಿಮೆ. ಹೆಂಡತಿ ತನ್ನ ಕರೀಯರಿನಲ್ಲಿ ಮುಂದೆ ಬಂದರೆ ಅವಳು ತನ್ನನ್ನು ತುಚ್ಛವಾಗಿ ನೋಡಬಹುದೇನೋ ಅನ್ನುವ ಆತಂಕ ಹೆಚ್ಚಿನ ಪತಿರಾಯರಿಗೆ ಇದ್ದೇ ಇರುತ್ತದೆ. ಅವಳೂ ತಮ್ಮ ಸಂಸಾರಕ್ಕಾಗಿಯೇ ದುಡಿಯುತ್ತಿರುವುದು ಅಂತ ಯಾಕೆ ಅನಿಸುವುದಿಲ್ಲವೋ. ಗಂಡನ `ಈಗೋ’ಗೆ ನೋವಾಗದ ರೀತಿಯಲ್ಲಿ ತನ್ನ ಕರೀಯರಿನಲ್ಲಿ ಒಳ್ಳೆಯ ಹೆಸರನ್ನು ಪಡೆಯುವುದು ಮಹಿಳೆಗೆ ದೊಡ್ಡ ಸವಾಲೇ. ಅದರಲ್ಲೂ ಗಂಡ ಹೆಚ್ಚು ಓದಿಲ್ಲದೇ ಒಳ್ಳೆಯ ಕೆಲಸದಲ್ಲೂ ಇರದೇ ಹೆಂಡತಿ ಬುದ್ಧಿವಂತೆಯಾಗಿದ್ದರಂತೂ ಗಂಡ ತನ್ನ ಕೀಳರಿಮೆಯಿಂದಾಗಿ ಹೆಂಡತಿಯ ಮನ ನೋಯಿಸುವುದೇ ಹೆಚ್ಚು. ನಿಮ್ಮ ವಿಷಯದಲ್ಲಿ ಹಾಗೇ ಆಗಿದೆ. ಒಮ್ಮೆ ನಿಮ್ಮ ಗಂಡನ ಹತ್ತಿರ ಸರಿಯಾಗಿ ಮಾತಾಡಿ. ನಿಮ್ಮ ಉದ್ಯೋಗ ನಿಮ್ಮ ಜವಾಬ್ದಾರಿಯನ್ನೂ ಬಯಸುವುದರಿಂದ ನೀವು ಹಾಗೇ ಇರುವುದು ಅನಿವಾರ್ಯ ಅಂತ ತಿಳಿಸಿಹೇಳಿ. ಅವರು ಈ ರೀತಿ ಸಂಶಯ ಪಡುತ್ತಿದ್ದರೆ ನಿಮಗೆ ಕೆಲಸ ಮಾಡಲೇ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅಂತಲೂ ಹೇಳಿ. ನೀವು ಅವರನ್ನು ಗೌರವಿಸುವುದಾಗಿಯೂ ಮತ್ತು ಅವರ ಈ ರೀತಿ ನಡೆವಳಿಕೆಯಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಗ್ಗುವುದಾಗಿಯೂ ತಿಳಿಸಿ. ಆದರೂ ಅಂತವರು ನೂರಕ್ಕೆ ನೂರು ಸರಿಹೋಗಿ ನಿಮಗೆ ಸಹಕಾರಿಯಾಗಿರುತ್ತಾರೆ ಅಂತ ಹೇಳಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೇ ನೀವು ನಿಮ್ಮ ಆತ್ಮಸಾಕ್ಷಿಗೆ ಬದ್ಧವಾಗಿ ನಿಮ್ಮ ಡ್ಯೂಟಿ ಮಾಡುತ್ತಾ ಹೋಗಿ.