ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಪಲ್ಟಿ, ಚಾಲಕ ಪಾರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಟ್ಟಡ ಕಾಮಗಾರಿಯ ಅವಶೇಷಗಳನ್ನು ಕೊಂಡೊಯ್ಯುತಿದ್ದ ಟಿಪ್ಪರ್ ಲಾರಿ ಚಾಲಕ ಎದುರಿನಿಂದ ಆಗಮಿಸುತಿದ್ದ ಬೈಕೊಂದಕ್ಕೆ ಸೈಡ್ ನೀಡುತ್ತಿರುವ ಮಧ್ಯೆ ನಿಯಂತ್ರಣ ತಪ್ಪಿದ ಲಾರಿ ಕಣಿಗೆ ಉರುಳಿ ಪಲ್ಟಿಯಾದ ಘಟನೆ ಉದ್ಯಾವರ 10 ನೇ ಮೈಲು ತೋಟ ಶಾಲಾ ಹೆದ್ದಾರಿ ಪಕ್ಕದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಅಪಘಾತದಿಂದ ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಆದರೆ ಲಾರಿಯನ್ನು ಮೇಲಕ್ಕೆತ್ತುವ ಸಂದರ್ಭ ಸುಮಾರು 20 ನಿಮಿಷ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆ ಉಂಟಾಗಿದೆ. ಲಾರಿಯನ್ನು ಸಂಪೂರ್ಣವಾಗಿ ಮೇಲಕ್ಕೆತಿದ ಬಳಿಕ ಸಂಚಾರ ಪುನರ್ ಆರಂಭಗೊಂಡಿದೆ. ಲಾರಿಯಲ್ಲಿದ್ದ ಕಟ್ಟಡ ಅವಶೇಷಗಳು ಸಂಕದ ಮೋರಿಯ ಕೆಳಭಾಗದ ನೀರು ಹರಿದು ಹೋಗುತ್ತಿರುವ ಸ್ಥಳದಲ್ಲಿ ತುಂಬಿಕೊಂಡಿದೆ. ಅಪಘಾತದಿಂದ ಲಾರಿಗೆ ಹಾನಿಯುಂಟಾಗಿದೆ.