ಬೆಂಗಳೂರಲ್ಲಿ ಪೊಲೀಸ್ ಭದ್ರತೆ

ಬೆಂಗಳೂರು : ತಮಿಳುನಾಡು ಸೀಎಂ ಜಯಾಲಲಿತಾ ಸಾವಿನ ಸುದ್ದಿ ಪ್ರಕಟಗೊಳ್ಳುತ್ತಲೇ ಶಾಂತಿ ಕಾಪಾಡುವ ಉದ್ದೇಶದಿಂದ ತಮಿಳುನಾಡು ಗಡಿ ಜಿಲ್ಲೆಗಳ ಚೆಕ್-ಪೋಸ್ಟುಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಆನೆಕಲ್, ಅತ್ತಿಬೇಲೆ, ಕನಕಪುರ, ತಲಘಟ್ಟಪುರ ಮತ್ತು ಐದು ಜಿಲ್ಲೆಗಳ ಇತರ ಪಟ್ಟಣಗಳಲ್ಲಿ ಕೆ ಎಸ್ ಆರ್ ಪಿ, ಸಿಎಆರ್ ಮತ್ತು ಡಿಎಆರ್ ತುಕಡಿಗಳನ್ನು ನಿಯುಕ್ತಿಗೊಳಿಸಲಾಗಿದೆ.

ಅಂತೆಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರರಂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜಯಾ ಸಾವಿನ ಸುದ್ದಿಯಿಂದ ಶಾಂತಿ ಕದಡುವ ಸಾಧ್ಯತೆ ಇದ್ದು, ಎಲ್ಲೆಡೆ ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ರಾಜ್ಯದಲ್ಲಿ ಭದ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಇಂದು ಡಿಜಿ & ಐಜಿಪಿ ಓಂಪ್ರಕಾಶ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯೊಂದು ನಡೆಯಲಿದೆ. “ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಮಿಳು ಜನರ ಬಾಹುಳ್ಯದ ಶ್ರೀರಾಮಪುರಂ, ಓಕಳಿಪುರಂ, ಮೈಸೂರು ರೋಡ್, ಸಗಾಯಿಪುರ, ಭಾರತೀನಗರ ಮೊದಲಾದೆಡೆ ಭದ್ರತೆ ಹೆಚ್ಚಿಸಲಾಗಿದೆ. ಡಿಸಿಪಿ (ಉತ್ತರ) ಲಾಬೂರಾಂ ನಿನ್ನೆಯೇ ಸ್ಥಳೀಯ ನಾಯಕರೊಂದಿಗೆ ತುರ್ತು ಸಭೆ ನಡೆಸಿ ಶ್ರೀರಾಮಪುರಂನಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.