ಗೌಡರ ಕುಟುಂಬದಲ್ಲಿ ಟಿಕೆಟ್ ಬಿರುಗಾಳಿ !

ಸ್ಪರ್ಧಿಸಲು ತುದಿಗಾಲಲ್ಲಿರುವ ಅನಿತಾ, ಪ್ರಜ್ವಲ್

 ವಿಶೇಷ ವರದಿ

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಗೆ ತಮ್ಮ ಕುಟುಂಬದಿಂದ ಕೇವಲ ಇಬ್ಬರು ಮಾತ್ರ ಸ್ಪರ್ಧಿಸುವುದಾಗಿ ಜೆಡಿ(ಎಸ್) ಅಧ್ಯಕ್ಷ ಎಚ್ ಡಿ ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪದೇ ಪದೇ ಹೇಳಿಕೆ ನೀಡುತ್ತಾ ಬಂದಿದ್ದರೂ, ಕುಟುಂಬದಿಂದ ಇನ್ನೂ ಇಬ್ಬರು ಚುನಾವಣಾ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆಂಬುದು ಇತ್ತೀಚಿಗಿನ ಬೆಳವಣಿಗೆಗಳಿಂದ ಸ್ಪಷ್ಟ.

ತಾನು ಮತ್ತು ಎಚ್ ಡಿ ರೇವಣ್ಣ ಮಾತ್ರ ಚುನಾವಣೆ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರೆ ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧಿಸಲು ಸ್ವತಹ ದೇವೇಗೌಡರೇ ಹಸಿರು ನಿಶಾನೆ ನೀಡಿದ್ದಾರೆಂದು ಆತನ ತಾಯಿ ಭವಾನಿ ರೇವಣ್ಣ ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಕುಮಾರಸ್ವಾಮಿಯಲ್ಲಿ ಕೇಳಿದರೆ `ಅವರನ್ನೇ ಕೇಳಿ’ ಎಂಬ ಉತ್ತರ ಬಂದಿದೆ.

ಅತ್ತ ಕುಮಾರಸ್ವಾಮಿಯ ಪತ್ನಿ ಅನಿತಾ ಕುಮಾರಸ್ವಾಮಿಯನ್ನೂ ಕಣಕ್ಕಿಳಿಸಲು ಪ್ರಯತ್ನಗಳು ಮುಂದುವರಿದಿವೆ ಎಂದು ತಿಳಿದುಬಂದಿದೆ. ಮಾಜಿ ಶಾಸಕಿಯಾಗಿರುವ ಆಕೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಅನುವು ಮಾಡಿಕೊಡುವ ಸಾಧ್ಯತೆಯಿದೆಯೆನ್ನಲಾಗಿದ್ದು ಒಂದು ವೇಳೆ ಅನಿತಾಗೆ ಟಿಕೆಟ್ ನೀಡಿದರೆ, ಪ್ರಜ್ವಲನಿಗೂ ಟಿಕೆಟ್ ನೀಡಲೇಬೇಕಾಗಬಹುದು ಎಂದು ಮೂಲಗಳು ತಿಳಿಸುತ್ತವೆ.

ಪ್ರಜ್ವಲ್ ರಾಜರಾಜೇಶ್ವರಿ  ಕ್ಷೇತ್ರದಿಂದ ಸ್ಪರ್ಧಿಸಲು ಒಲವು ಹೊಂದಿದ್ದಾನೆಂದು ಹೇಳಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಪ್ರಜ್ವಲನನ್ನು ಕಣಕ್ಕಿಳಿಸಲು ದೇವೇಗೌಡ ಮನಸ್ಸು ಹೊಂದಿದ್ದಾರೆಂದು ಹೇಳಲಾಗುತ್ತಿದೆಯಾದರೂ ಪ್ರಜ್ವಲ್ ಮಾತ್ರ ರಾಜ್ಯ ರಾಜಕಾರಣದಲ್ಲೇ ಆಸಕ್ತಿ ವಹಿಸಿದ್ದಾನೆ.

ಒಟ್ಟಾರೆಯಾಗಿ ಚುನಾವಣೆ ಹತ್ತಿರ ಬರಲಾರಂಭಿಸುತ್ತಿದ್ದಂತೆಯೇ ಗೌಡರ ಕುಟುಂಬದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮತ್ತೆ ಭಿನ್ನಾಬಿಪ್ರಾಯಗಳು ಭುಗಿಲೇಳಲಿವೆಯೇ ಎಂಬ ಕುತೂಹಲ ಎಲ್ಲೆಡೆ  ಮೂಡಿದೆ.