ಮುಂಬೈ ಇಂಡಿಯನ್ಸ್ ರೋಚಕ ಗೆಲುವು

ಬೂಮ್ರಾ, ಹರ್ಭಜನ್ ಮಾರಕ ದಾಳಿ  

ನಿತೇಶ್ ರಾಣಾ ಗಮನಾರ್ಹ ಬ್ಯಾಟಿಂಗ್

  • ಎಸ್ ಜಗದೀಶ್ಚಂದ್ರ ಅಂಚನ್

ಬುಧವಾರ ಮುಂಬೈಯಲ್ಲಿ ನಡೆದ ಐಪಿಎಲ್ ಟೂರ್ನಿಯ ಹತ್ತನೇ  ಪಂದ್ಯ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಗೆಲುವಿನ ಝಲಕ್  ನೀಡಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಮಾಂಚಕ ರೀತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ನರ ಗರ್ವಭಂಗವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ  ಹೈದರಾಬಾದ್  ತಂಡ ಉತ್ತಮ ಆರಂಭವನ್ನೇ ನೀಡಿತು. ತಂಡದ ನಾಯಕ ಡೇವಿಡ್ ವಾರ್ನರ್ (49 ರನ್) ಹಾಗೂ ಶಿಖರ್ ಧವನ್ (48 ರನ್)  ಮೊದಲ ವಿಕೆಟಿಗೆ ಭರ್ಜರಿ ಆರಂಭ ಕಂಡುಕೊಂಡರು. 81 ರನ್  ಜೊತೆಯಾಟ ನೀಡಿದ ಈ ಇಬ್ಬರ ನಿರ್ಗಮನದ ನಂತರ ಹೈದರಾಬಾದ್ ತಂಡದ ಬೇರೆ ಯಾರೊಬ್ಬ ದಾಂಡಿಗರೂ ಸ್ಥಿರತೆ ಬ್ಯಾಟಿಂಗ್ ನಡೆಸಲು ವಿಫಲರಾದರು.

ಬೆನ್ ಕಟ್ಟಿಂಗ್ 20 ರನ್ ಗಳಿಸಿ ತಂಡವನ್ನು ಸ್ವಲ್ಪ ಮಟ್ಟಿಗೆ  ಆಧರಿಸಿದರು. ಮುಂಬೈ ಇಂಡಿಯನ್ಸ್ ಬೌಲರುಗಳು ಕರಾರುವಾಕ್ಕಾಗಿ ಬೌಲಿಂಗ್ ನಡೆಸಿದರು. ಹರ್ಭಜನ್ ಸಿಂಗ್ (21 ರನ್ನಿಗೆ 2 ವಿಕೆಟ್) ಹಾಗೂ ಬೂಮ್ರಾ (24 ರನ್ನಿಗೆ 3 ವಿಕೆಟ್) ಬೌಲಿಂಗಿನಲ್ಲಿ  ಮಿಂಚಿ ಹೈದರಾಬಾದ್ ತಂಡದ ಸ್ಕೋರ್ 158ಕ್ಕೆ ನಿಯಂತ್ರಿಸಿದರು.

ಹೈದರಾಬಾದ್ ತಂಡದ ಈ ಮೊತ್ತಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಹಿಂದಿನ ಪಂದ್ಯದಲ್ಲಿ  ಕೆಕೆಆರ್ ವಿರುದ್ಧ ಪಡೆದ ಜಯದ ನೆನಪು ಈ ಪಂದ್ಯದಲ್ಲೂ ಮರುಕಳಿಸಿತು. ಮುಂಬೈ ಇಂಡಿಯನ್ಸ್  ತಂಡದ ಗೆಲುವಿನಲ್ಲಿ ಪ್ರಧಾನ  ಪಾತ್ರ ವಹಿಸಿದವರು.  ನಿತೇಶ್ ರಾಣಾ. ಇವರು  45 ರನ್ ಗಳಿಸಿ ಪಂದ್ಯವನ್ನು ಗೆಲುವಿನ  ದಡ ಸೇರಿದರು.  ಫಾರ್ಥಿವ್ ಪಟೇಲ್ (39 ರನ್) ಹಾಗೂ ಕೃನಾಲ್ ಪಾಂಡ್ಯಾ (31ರನ್) ಕೂಡ ಬ್ಯಾಟಿಂಗಿನಲ್ಲಿ  ಗಮನ ಸೆಳೆದರು. ಹೈದರಾಬಾದ್ ತಂಡದ ಭುವನೇಶ್ವರ ಕುಮಾರ್  ಕೊನೆಯಲ್ಲಿ ಅದ್ಭುತ ಬೌಲಿಂಗ್ ನಡೆಸಿ ಮುಂಬೈ  ಇಂಡಿಯನ್ಸಗೆ ಭಯ ಹುಟ್ಟಿಸಿದರು. ಆದರೆ ಅಂತಿಮವಾಗಿ ಮುಂಬೈ  ಇಂಡಿಯನ್ಸ್  ನಾಲ್ಕು  ವಿಕೆಟ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಸತತ ಗೆಲುವಿನ ಅಬ್ಬರದಲ್ಲಿದ್ದ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಗರ್ವಭಂಗ ಮುಂಬೈ ಇಂಡಿಯನ್ಸ್ ತಂಡದಿಂದ ಸಾಧ್ಯವಾಗಿದೆ.

ವೇಗದ ಬೌಲಿಂಗ್ ಮೂಲಕ  24ರನ್ನಿಗೆ 3 ವಿಕೆಟ್ ಪಡೆದು ಹೈದರಾಬಾದ್ ತಂಡದ ಪತನಕ್ಕೆ ಕಾರಣರಾದ ಜಸ್ ಪ್ರೀತ್ ಬೂಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.