ಮೂವರು ದರೋಡೆಕೋರರ ಸೆರೆ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಕೂಲಿ ಕೆಲಸ ಮುಗಿಸಿ ಬರುತ್ತಿರುವ ಉತ್ತರ ಭಾರತ ಮೂಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹೊಂಚುಹಾಕಿ ದರೋಡೆ ನಡೆಸುತ್ತಿದ್ದ ಮೂವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಮುಝಾಂಬಿಲ್ (22), ಹಳೆ ವಿಮಾನ ನಿಲ್ದಾಣ ರಸ್ತೆ ನಿವಾಸಿ ಶುಹುದ್ (19), ಬಜಪೆ ನಿವಾಸಿ ಕಮಲುದ್ದೀನ್ (19) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ರಾತ್ರಿ ಅಂಗರಗುಂಡಿ ಕೈಗಾರಿಕಾ ಪ್ರದೇಶದ ರೈಲು ಹಳಿ ಬಳಿ ತನ್ನ ಕೋಡಿಕೆರೆ ಬಾಡಿಗೆ ಮನೆಗೆ ನಡೆದು ಹೋಗುತ್ತಿದ್ದ ಅಸ್ಸಾಂ ಮೂಲದ ಕಮಲುದ್ದೀನನ್ನು ಅಡ್ಡಗಟ್ಟಿದ ಈ ತಂಡ 32,000 ರೂ ಸುಲಿಗೆ ಮಾಡಿ ಪರಾರಿ ಆಗಿತ್ತು. ಅಲ್ಲದೆ ಅವರ ಬಳಿ ಇದ್ದ ಮೊಬೈಲ್ ಫೋನನ್ನು ಕಿತ್ತೆಸೆದು ಪುಡಿಗೈದು ಪರಾರಿಯಾಗಿದ್ದರು.
ಇದೇ ತಂಡದ ಇನ್ನಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಭಾನುವಾರ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಇದೇ ರೀತಿ ದರೋಡೆ ನಡೆಸಲು ಆಗಮಿಸಿದ್ದ ತಂಡವನ್ನು ಬೆನ್ನಟ್ಟಿದ ವೇಳೆ ಆರೋಪಿಗಳು ಬಂದಿದ್ದ ಎರಡು ಬೈಕುಗಳನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಅವುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು.
ಉತ್ತರ ಭಾರತ ಮೂಲದ ಕಾರ್ಮಿಕರ ಚಲನವಲನಗಳ ಮೇಲೆ ಕಣ್ಣಿಟ್ಟು, ಅವರು ಸಂಬಳ ಪಡೆದು ಬರುತ್ತಿರುವುದನ್ನು ಖಚಿತ ಪಡಿಸಿದ ಬಳಿಕ ರಾತ್ರಿ ವೇಳೆ ಹೊಂಚು ಹಾಕಿ ದರೋಡೆ ನಡೆಸುತ್ತಿದ್ದರು. ಶನಿವಾರ ಕಾರ್ಮಿಕರಿಗೆ ವೇತನ ಸಿಗುವ ದಿನವಾದ್ದರಿಂದ ಅದೇ ದಿನ ದರೋಡೆ ನಡೆಸುತ್ತಿದ್ದರು.