`ಮತಧರ್ಮ ಕಾದಾಟದಿಂದ ಜಿಲ್ಲೆಯ ಅಭಿವೃದ್ಧಿಗೆ ಧಕ್ಕೆ’

ಉಸ್ತುವಾರಿ ಸಚಿವ ರೈ ಕಳವಳ

ಮಂಗಳೂರು : “ಸಮಾಜದ ಎಲ್ಲೇ ಆಗಲಿ ನಿರಂತರ ಸಂಘರ್ಷ ನಡೆಯುತ್ತಿದ್ದರೆ ಅಂತಹ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗುತ್ತದೆ. ಮತಧರ್ಮ ವಿಷಯದಲ್ಲಿ ಜನರು ಇದೇ ರೀತಿ ಕಾದಾಡುತ್ತಿದ್ದರೆ ದ ಕ ಜಿಲ್ಲೆಯ ಅಭಿವೃದ್ಧಿಗೆ ತೀವ್ರ ಪೆಟ್ಟು ಬೀಳಲಿದೆ” ಎಂದು ಸಂದರ್ಶನದÀಲ್ಲಿ ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಸಮುದಾಯಗಳ ಕೋಮು ಶಮನಕ್ಕೆ ಸರ್ಕಾರ ಮತ್ತು ಪೊಲೀಸರು ಏನೇನೂ ಕೆಲಸ ಮಾಡಿಲ್ಲ ಎಂಬ ಆರೋಪ ಅಲ್ಲಗಳೆದ ರೈ, “ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೋಮುಗಲಭೆ ಯೋಜನಾಬದ್ಧವಾಗಿತ್ತು. ಇದರಲ್ಲಿ ಸಮಾಜಘಾತುಕ ಶಕ್ತಿಗಳು ಕೈಮಿಲಾಯಿಸಿದ್ದರು” ಎಂದು ಆರೋಪಿಸಿದರು.

“ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸುತ್ತಲೇ ಸಮಾಜ ಒಡೆಯುವ ಕೆಲಸ ಇಲ್ಲಿ ಕೆಲವು ವರ್ಷಗಳಿಂದ ಮುಂದುವರಿದಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಇತ್ತೀಚಿನ ಘಟನೆ ಹಿಂದಿನ ಘಟನೆಗಳಿಗೆ ಭಿನ್ನವಾಗಿದ್ದು, ಈ ಬಾರಿ ಇಲ್ಲಿ ಕೊಲೆಗಳು ಯೋಜನಾಬದ್ಧವಾಗಿ ನಡೆದಿವೆ” ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

“ಕೊಲೆ ಘಟನಗಳ ರಹಸ್ಯ ಬೇಧೀಸಲು ಪೊಲೀಸ್ ಬಲ ಶಕ್ತವಾಗಿದ್ದರೂ, ಸತ್ಯ ಬಯಲಾಗುವುದು ಇಲ್ಲಿನ ಮತೀಯ ಗುಂಪುಗಳಿಗೆ ಅಥವಾ ಮತೀಯ ಶಕ್ತಿಗಳಿಗೆ ಬೇಡವಾಗಿದೆ” ಎಂದವರು ಹೇಳಿದ್ದಾರೆ.