ಜಲ್ಲಿಕಟ್ಟು ನಿಷೇಧ ಹಿಂಪಡೆಯಲು ಬೀದಿಗಿಳಿದ ಸಾವಿರಾರು ಮಂದಿ

 ಚೆನ್ನೈ : ರಾಜ್ಯದ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು ನಿಷೇಧ ಹಿಂದೆಗೆದುಕೊಳ್ಳಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದ್ದು  ನಿನ್ನೆ ರವಿವಾರದಂದು  ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಿ ಜಲ್ಲಿಕಟ್ಟಿಗೆ ಅನುಮತಿ ನೀಡಬೇಕೆಂದು ಮರೀನಾ ಬೀಚ್ ಪ್ರದೇಶದಲ್ಲಿ ರವಿವಾರ ಸೇರಿದ 5000ಕ್ಕೂ ಮಿಕ್ಕಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಪ್ರತಿಭಟನಾಕಾರರು  `ಪೆಟಾ’ ಸಂಘಟನೆಯ ವಿರುದ್ಧ ಘೋಷಣೆಗಳನ್ನೂ ಕೂಗಿದರಲ್ಲದೆ ಅಧ್ಯಾದೇಶ ಹೊರಡಿಸುವಂತೆ ಕೋರಿ ಕೇಂದ್ರ ಸರಕಾರಕ್ಕೆ ತಮಿಳುನಾಡು ಸರಕಾರ ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.

ಪ್ರಾಣಿಗಳಿಗೆ ಹಿಂಸೆ ನೀಡುತ್ತಿದೆಯೆಂಬ ನೆಪದಲ್ಲಿ ಮೇ 2014ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಜಲ್ಲಿಕಟ್ಟು ಕ್ರೀಡೆಗೆ ಕೆಲವು ಷರತ್ತುಗಳನ್ನು ವಿಧಿಸಿ ಕೇಂದ್ರ ಸರಕಾರ ಕಳೆದ ವರ್ಷದ ಜನವರಿ 8ರಂದು ಹಿಂದಿನ ನಿರ್ಬಂಧಗಳನ್ನು ಸಡಿಲಿಸಿತ್ತು. ಮುಂದಿನ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ತನ್ನ 2014ರ ತೀರ್ಪನ್ನು ಮರುಪರಿಶೀಲಿಸಲು  ನಿರಾಕರಿಸಿತ್ತಲ್ಲದೆ ಕೇಂದ್ರ ಸರಕಾರದ ಅಧಿಸೂಚನೆಗೆ ತಡೆ ಹಾಕಿತ್ತು.