ನಾಗ್ಪುರದಲ್ಲಿ ಸಾವಿರಾರು ಹಿಂದುಳಿದ ವರ್ಗದ ಹಿಂದೂಗಳು ಬೌದ್ಧ ಧರ್ಮಕ್ಕೆ

ನಾಗ್ಪುರ : ಮಹಾರಾಷ್ಟ್ರದ ಎರಡನೇ ರಾಜಧಾನಿ ಎನ್ನಲಾದ ನಾಗ್ಪುರದಲ್ಲಿ ಸೋಮವಾರ ಹಿಂದೂ ಧರ್ಮದ ಸಾವಿರಾರು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರು ಮತ್ತು ಇತರ ಧರ್ಮಗಳ ಕೆಲವು ಕುಟುಂಬಿಕರು ಇಲ್ಲಿನ ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು.

ದೀಕ್ಷಾಭೂಮಿಯಲ್ಲಿ ಸಾರ್ವಜನಿಕ ಧಮ್ಮ ದೀಕ್ಷಾ ಪರಿಷತ್ ಕಾರ್ಯಕ್ರಮವೊಂದು ಆಯೋಜಿಸಲಾಗಿದ್ದು, ಮರಾಠವಾಡ ಮತ್ತು ಕೊಂಕಣ ಪ್ರಾಂತ್ಯದ ಮರಾಠ, ತೆಲಿ, ಚರ್ಮಕಾರ, ಮಾತಂಗ, ಲಿಂಗಾಯತ, ಧಾಂಗರ, ಕುಂಬಿ ಮೊದಲಾದ ಜಾತಿಯವರು ಪಾಲ್ಗೊಂಡಿದ್ದರು. ಬೌದ್ಧ ಧಮ್ಮಗುರು ಭದಂತ್ ಸುರಾೈ ಸಸಾೈ ಇವರೆಲ್ಲರಿಗೆ ಬೌದ್ಧ ಧರ್ಮ ದೀಕ್ಷೆ ನೀಡಿದರು.

“ಹಿಂದೂತ್ವದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಅವಕಾಶವಿಲ್ಲ ಎಂಬುದರ ಮೇಲೆ ಸತ್ಯಶೋಧಕ ಒಬಿಸಿ ಪರಿಷತ್ ನಂಬಿಕೆ ಇಟ್ಟಿದೆ. ಹಿಂದೂಗಳಲ್ಲಿ ನಾವು ಈಗಲೂ ಶೂದ್ರರಂತೆ ಪರಿಗಣಿತರಾಗಿದ್ದೇವೆ. ಆದ್ದರಿಂದ ನಾವೀಗ ನಮ್ಮ ಮೂಲದ ಬೌದ್ಧ ಧರ್ಮಕ್ಕೆ ಮರಳುವುದೇ ಲೇಸೆಂದು ನಂಬಿದ್ದೇವೆ. ಒಬಿಸಿಯೆಂದರೆ ನಾಗವಂಶಿಯಾಗಿದ್ದು, ಅದು ಬೌದ್ಧಧರ್ಮವಾಗಿದೆ ಮತ್ತು ನಮ್ಮ ನಿಜವಾದ ಧರ್ಮವಾಗಿದೆ. ನಾವೀಗ ಬೌದ್ಧ ಧರ್ಮಕ್ಕೆ `ಘರ್ ವಾಪ್ಸಿ’ಯಾಗಲು ಇಚ್ಚಿಸಿದ್ದೇವೆ” ಎಂದು ಪರಿಷತ್ತಿನ ಅಧ್ಯಕ್ಷ ಸಂದೀಪ್ ಹನುಮಂತ್ ಉಪ್ರೆ ಹೇಳಿದರು.

“ಧರ್ಮವೆಂದರೆ ಮನೆಯಂತೆ, ಅಲ್ಲಿ ಎಲ್ಲರೂ ಸಮಾನ ಮತ್ತು ಗೌರವಯುತವಾಗಿ ಬದುಕಬೇಕು. ಹಿಂದೂತ್ವದಲ್ಲಿ ನಾವು ಅಂತಹ ಅವಕಾಶ ವಂಚಿತರಾಗಿದ್ದೇವೆ. ಕಾರಣ, ನಾವು 2011ರಲ್ಲಿ ಘರ್ ವಾಪ್ಸಿ ಆರಂಭಿಸಿದ್ದೇವೆ. 2016ರಲ್ಲಿ 5,000 ಮಂದಿ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಭವಿಷ್ಯದಲ್ಲಿ ಇನ್ನೂ ಕೆಲವರು ಮತಾಂತರವಾಗಲಿದ್ದಾರೆ” ಎಂದರು.