`ಸರತಿಯಲ್ಲಿ ನಿಂತು ಬ್ಯಾಂಕಿಗೆ ಹಣ ಕಟ್ಟಿದವರಿಗೆ ಏನೂ ಸಿಗಲಿಲ್ಲ’

ಭಾರತೀಯ ಅರ್ಥವ್ಯವಸ್ಥೆ ಮುಳುಗುತ್ತಿರುವ ಬಗ್ಗೆ ಈಗ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾರ್ಟರ್ಡ್ ಅಕೌಂಟಂಟ್ ಹಾಗೂ ರಾಜಕೀಯ ವಿಶ್ಲೇಷಕ ಎಂ ಆರ್ ವೆಂಕಟೇಶ್ ಅಭಿಪ್ರಾಯ ಇಲ್ಲಿದೆ.

  • ಮಾಜಿ ಹಣಕಾಸು ಸಚಿವರಿಂದ ಸಾಮಾನ್ಯ ಜನತೆಯವರೆಗೆ ಎಲ್ಲರೂ ನಿಧಾನಗತಿಯಲ್ಲಿ ಸಾಗುತ್ತಿರುವ ಅರ್ಥವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅರ್ಥವ್ಯವಸ್ಥೆಯಲ್ಲಿ ಗೊಂದಲ ತಂದಿದ್ದಾರೆ ಎನ್ನುವ ಆರೋಪ ನಿಜವೆ ?

ಸ್ವಲ್ಪ ಮಟ್ಟಿಗೆ ನಿಜ. ಮೋದಿ ಅದಕ್ಕೆ ಸಂಪೂರ್ಣ ಕಾರಣ ಅಥವಾ ಭಾರತೀಯ ಅರ್ಥವ್ಯವಸ್ಥೆ ಮುಳುಗೇ ಹೋಗುತ್ತದೆ ಎಂದು ನಾನು ಹೇಳುವುದಿಲ್ಲ. ಈಗ ಶೇ 5.7ರ ಪ್ರಗತಿ ದರವಿದೆ, ನಮ್ಮ ಪ್ರಗತಿ ನಿಂತಿಲ್ಲ. 8.5ರ ಪ್ರಗತಿದರ ಸಾಧಿಸಬಹುದಾಗಿದ್ದ ನಾವು ಕುಸಿತ ಕಂಡಿದ್ದೇವೆ ಎನ್ನುವುದು ನಿಜ.

  • ನೋಟು ಅಮಾನ್ಯೀಕರಣ, ತಟಸ್ಥ ಆಸ್ತಿಗಳು (ಎನ್ಪಿಎ) ಮತ್ತು ಜಿಎಸ್ಟಿ ಜೊತೆಯಾಗಿ ಬಂದಿರುವುದನ್ನು ಅರ್ಥವ್ಯವಸ್ಥೆ ನಿಭಾಯಿಸಲು ಸಾಧ್ಯವಾಗಿಲ್ಲ ಎನ್ನುವ ಟೀಕೆ ನಿಜವೆ ?

ಇದೂ ಸ್ವಲ್ಪ ಮಟ್ಟಿಗೆ ನಿಜ. ನೋಟು ಅಮಾನ್ಯೀಕರಣ ವಸ್ತುಶಃ ನಿಲ್ಲಿಸಿದ್ದ ಅರ್ಥವ್ಯವಸ್ಥೆಗೆ ಚಲನೆ ಬಂದು ತೊಂದರೆಗೀಡಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಚೇತರಿಸಿಕೊಳ್ಳುತ್ತಿದ್ದವು. ಆಗಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಂದಾಗ ಹಣಕಾಸು ಸಚಿವಾಲಯ ಗ್ರಾಮೀಣ ಪ್ರದೇಶಗಳ ಸಣ್ಣ ಮತ್ತು ಮಧ್ಯಮ ಉದ್ಯಮಗಳ ನೆರವಿಗೆ ಬರಬೇಕಾಗಿತ್ತು. ಕಾನೂನು ವಿಚಾರವಾಗಿ ಎಲ್ಲವೂ ಅಸ್ತವ್ಯಸ್ತವಾಗಿವೆ. ನಿಮ್ಮ ಒಳಬರುವ ತೆರಿಗೆ ಶೇ 18 ಮತ್ತು ಹೊರಹೋಗುವುದು ಶೇ 5 ಆಗಿರುವಾಗ, ಶೇ 13 ತಟಸ್ಥವಾಗಿರುತ್ತದೆ. ಕೆಲವೆಡೆ ಇದು ಮರುಪಾವತಿಯಾಗುವುದೂ ಇಲ್ಲ. ಅಂದರೆ ನೀವು ಮಾರುವ ಪ್ರತೀ ರೂಪಾಯಿಯ 13 ಪೈಸೆ ಕಳೆದುಕೊಳ್ಳುತ್ತೀರಿ. ಈ ದೇಶದಲ್ಲಿ 600 ಜಿಲ್ಲೆಗಳಿವೆ, ಕೇವಲ 6000 ಜಿಎಸ್ಟಿ ಕೇಂದ್ರಗಳು ಇವನ್ನು ನಿಭಾಯಿಸುವುದು ಸಾಧ್ಯವೇ ಇಲ್ಲ. ನೋಟು ಅಮಾನ್ಯೀಕರಣದಿಂದ ಅಲ್ಲೋಲಕಲ್ಲೋಲವಾದ ಅರ್ಥವ್ಯವಸ್ಥೆ ಜಿಎಸ್ಟಿ ಎದುರಿಸುವಷ್ಟು ಸಮರ್ಥವಾಗಿಲ್ಲ.

  • ಸ್ವಲ್ಪ ಸಮಯದ ನಂತರ ಈ ಉದ್ರೇಕಕಾರಿ ವರ್ತನೆಗಳು ಬದಲಾಗಬಹುದೆ ?

ಉದ್ರೇಕ ತಪ್ಪದು. ಜಿಎಸ್ಟಿ ಒಂದು ರೀತಿಯ ತೆರಿಗೆ ಜಿಹಾದ್. ನಿಮ್ಮ ತೆರಿಗೆ ವಿವರ ಸಲ್ಲಿಸುವಾಗ ಕೇಳುವ ವಿವರಗಳು ಅನಗತ್ಯ. ಅಧಿಕಾರಶಾಹಿ ಈ ವಿವರಗಳನ್ನು ಪ್ರಾಮಾಣಿಕ ತೆರಿಗೆದಾರರನ್ನು ಹೆದರಿಸಲು ಬಳಸುವುದರಲ್ಲಿ ಸಂಶಯವಿಲ್ಲ. ಇದು ಅರ್ಥವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತದೆ. ಮಾಸಿಕ ವ್ಯವಹಾರ ರೂ 10 ಕೋಟಿ ಇರುವ ವ್ಯಕ್ತಿಯೊಬ್ಬ ರೂ 1.3 ಕೋಟಿ ಕಳೆದುಕೊಂಡು ಹೇಗೆ ವ್ಯವಹಾರ ಮಾಡಬಲ್ಲ ? ಆತ ಕಂಪನಿ ಮುಚ್ಚಿದಾಗ ಆತನ ಗ್ರಾಹಕರು, ಸಿಬ್ಬಂದಿ ಎಲ್ಲರೂ ಅದರ ಬಿಸಿ ಅನುಭವಿಸುತ್ತಾರೆ.

  • ಇದಕ್ಕೆ ಯಾರನ್ನು ದೂಷಿಸಬೇಕು ?

ನಾವು ಆರಂಭದಿಂದಲೇ ಇದರ ವಿರುದ್ಧ ಎಚ್ಚರಿಸಿದ್ದೇವೆ. 2014ರಲ್ಲಿ ಮೋದಿ ಸರ್ಕಾರ ಅರ್ಥವ್ಯವಸ್ಥೆಯ ಶ್ವೇತಪತ್ರ ಏಕೆ ತರಲಿಲ್ಲ. ಈಗ ಪ್ರಾಮಾಣಿಕ ತೆರಿಗೆದಾರರ ಮೇಲೆ ಬರೆ ಎಳೆಯಲಾಗಿದೆ. ಭ್ರಷ್ಟರು ಈಗಲೂ ಆರಾಮವಾಗಿದ್ದಾರೆ.

  • ಮೂರು ವರ್ಷಗಳ ಅಧಿಕಾರದ ನಂತರವೂ ಹಿಂದಿನ ಸರ್ಕಾರವನ್ನು ತೆಗೆಳುವುದರಲ್ಲಿ ಅರ್ಥವಿಲ್ಲ ಎನ್ನುವ ಯಶವಂತ ಸಿನ್ಹಾ ಮಾತು ಒಪ್ಪುವಿರಾ ?

ಹೌದು. ಯಾವಾಗಲೂ ನೆಹರು, ಪಟೇಲ್ ಮತ್ತು ಸಮಾಜವಾದವನ್ನೇ ದೂರುವುದು ಸರಿಯಲ್ಲ. ನೀವು ಅದನ್ನು ಬಿಟ್ಟು ಮುಂದೆ ಸಾಗಬೇಕು.

  • ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ವಾಪಾಸಾಗಿಲ್ಲ ಬದಲಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ಏಟಾಗಿದೆ ಎನ್ನುವ ವಾದ ?

ಆ ವಾದ ಸರಿ. ಜನರು ಸರತಿಯಲ್ಲಿ ನಿಂತು ಹಣ ಕಟ್ಟಿದ್ದಾರೆ. ಆದರೆ ಲಾಭವೇನೂ ಆಗಿಲ್ಲ. ಇದಕ್ಕಾಗಿ ಕನಿಷ್ಠ ಸರಳ ಜಿಎಸ್ಟಿ ಅಥವಾ ಕಡಿಮೆ ಆದಾಯ ತೆರಿಗೆಯ ನೆರವನ್ನಾದರೂ ನೀಡಬೇಕಾಗಿತ್ತು.