ಭ್ರಷ್ಟಾಚಾರ ಆರೋಪ ಹೊರಿಸಿದವರಿಗೆ ಚಪ್ಪಲಿಯಿಂದ ಏಟು : ಸಚಿವ ರಿಜಿಜೂ

ನವದೆಹಲಿ : ತನ್ನ ಮೇಲೆ ಭ್ರಷ್ಟಾಚಾರದ ಆರೋಪ ಸುದ್ದಿ ಮಾಡಿದವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದ ಕೇಂದ್ರ ಗೃಹ ರಾಜ್ಯ ಸಚಿವ ಕಿರೇನ್ ರಿಜಿಜೂ ಬೆದರಿಕೆಯೊಡ್ಡಿದ್ದಾರೆ.

ಇಂಡಿಯನ್ ಎಕ್ಸ್‍ಪ್ರೆಸ್ ತನ್ನ ಮತ್ತು ದೂರದ ಸಂಬಂಧಿಯೊಬ್ಬರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಲಾದ ಸುದ್ದಿ ಪ್ರಕಟಿಸಿದೆ ಎಂದು ಕುಪಿತಗೊಂಡ ಸಚಿವ ವಿವರಿಸಿದರು.

ರಿಜಿಜೂ ಶಾಮೀಲಾಗಿರುವ ಹಗರಣದ “ಆಡಿಯೋ ಪುರಾವೆ’ ಇದೆ ಎಂದು ಕಾಂಗ್ರೆಸ್ ಹೇಳಿದೆ.

ರಿಜಿಜೂ ಮತ್ತು ಅವರ ಸಂಬಂಧಿಯಾಗಿರುವ ಅರುಣಾಚಲ ಪ್ರದೇಶದ ಗುತ್ತಿಗೆದಾರ ಗೋಬೊೈ ರಿಜಿಜೂ ಹಾಗೂ ಈಶಾನ್ಯ ವಿದ್ಯುತ್ ನಿಗಮದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಹಿತ ಕೆಲವಾರು ಉನ್ನತ ಅಧಿಕಾರಿಗಳು ಅರುಣಾಚಲ ಪ್ರದೇಶದಲ್ಲಿ 600 ಎಂಡಬ್ಲ್ಯೂ ಕೇಮೆಂಗ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟಿಗೆ ಎರಡು ಅಣೆಕಟ್ಟು ನಿರ್ಮಿಸುವಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆಂದು ಪಿಎಸ್‍ಯುನ ಮುಖ್ಯ ವಿಜಿಲೆನ್ಸ್ ಅಧಿಕಾರಿಯ ವರದಿ ಹೇಳಿದೆ ಎಂದು ಪತ್ರಿಕೆ ಪ್ರಕಟಿಸಿದೆ.

ತನ್ನ ಮೇಲಿನ ಬಲವಾದ ಆರೋಪ ಬದಿಗೊತ್ತಿ ಸುತ್ತಿಬಳಸಿ ಮಾತನಾಡಿದ ಸಚಿವ ರಿಜಿಜೂ, ತನ್ನವರಿಗೆ ನೆರವಾಗುವುದು ಭ್ರಷ್ಟಾಚಾರವೇ ಎಂದು ಸವಾಲೆಸೆದಿದ್ದಾರೆ.