ಸಮಗ್ರ ತನಿಖೆಯಿಂದ ತ್ವರಿತ ವಸೂಲಾತಿ ನಿರೀಕ್ಷೆ : ಅಧ್ಯಕ್ಷ

ಸುದ್ದಿಗಾರರೊಂದಿಗೆ ಮಾತಾಡಿದ ಕ್ಯಾಂಪ್ಕೋ ಅಧ್ಯಕ್ಷ ಸತೀಶಚಂದ್ರ ಮತ್ತಿತರರು

ಕ್ಯಾಂಪ್ಕೋ ಶಿರಸಿ ಶಾಖೆಯಲ್ಲಿ ಕೋಟ್ಯಂತರ ರೂ ಹಗರಣ 

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಕ್ಯಾಂಪ್ಕೋ ಶಿರಸಿ ಶಾಖೆಯಲ್ಲಾದ ಹಗರಣಕ್ಕೆ ಸಂಬಂಧಿಸಿ ಪೊಲೀಸ್ ಪ್ರಕರಣ ದಾಖಲಾಗಿದೆ. ಆಪಾದಿತ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದ್ದು, ಅದರ ಬಗ್ಗೆಯೂ ಕೋರ್ಟಿನಲ್ಲಿ ಕೇಸ್ ಹಾಕಿದ್ದೇವೆ. ಇದಲ್ಲದೇ ಬೆಂಗಳೂರಿನ ಸಹಕಾರಿ ಜಂಟಿ ನಿಬಂಧಕರ ಕೋರ್ಟಿನಲ್ಲೂ ವಿಶೇಷ ದೂರು ನೀಡಿದ್ದು, ಅಲ್ಲಿಯೂ ತನಿಖೆ ಆಗುತ್ತಿದೆ. ಎಲ್ಲ ರೀತಿಯಿಂದ ತನಿಖೆ ನಡೆದು ಹಣದ ವಸೂಲಾತಿ ಜತೆಗೆ ತಪ್ಪಿತಸ್ಥರಿಗೂ ಸೂಕ್ತ ಕ್ರಮ ಆಗಲಿದೆ” ಎಂದು ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಹೇಳಿದರು.

ಅವರು ಮಂಗಳವಾರ ಸಂಜೆ ಶಿರಸಿ ಟಿ ಎಸ್ ಎಸ್ ಹಬ್ಬಕ್ಕೆ ಬಂದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಸಿಬ್ಬಂದಿ ಚಿದಂಬರ ಶೆಟ್ಟಿ ನೇತೃತ್ವದಲ್ಲಿ ಆದ ಹಗರಣದ ಸಂಗತಿ ತಿಳಿದ ತಕ್ಷಣ ನಮ್ಮ ಸಂಸ್ಥೆಯಿಂದ ಸಮಗ್ರ ಪರಿಶೀಲನೆ ಮಾಡಿಸಿದಾಗ 3.09 ಕೋಟಿ ರೂ ಹಾಗೂ ಬಡ್ಡಿ ಸೇರಿ 3.50 ಕೋಟಿ ರೂ.ಗಳಷ್ಟು ಹಗರಣದ ದಾಖಲೆ ಸಿಕ್ಕಿತು. ಸಹಕಾರಿ ಪ್ರಮುಖರ, ಇತರರ ಸಮ್ಮುಖದಲ್ಲಿ ಸಭೆ ನಡೆದು ಹಣ ತುಂಬಲು ಸೂಚಿಸಿದರೂ ಆಪಾದಿತನು ವಿಳಂಬ ಮಾಡಿದನು. ಅವರು ಕೊಟ್ಟ 3.50 ಕೋಟಿ ರೂ ಚೆಕ್ ಸಹ ಅಮಾನ್ಯವಾಯಿತು. ಬಳಿಕ ನಮ್ಮ ಹಾಲಿ ಹಾಗೂ ಮಾಜಿ ಸಿಬ್ಬಂದಿ ಸಹಿತ 9 ಜನರ ಮೇಲೆ ಕೇಸ್ ಹಾಕಿದೆವು. ಅದರ ತನಿಖೆ ನಡೆಯುತ್ತಿದೆ. ಚೆಕ್ ಅಮಾನ್ಯ ಕೇಸ್ ಸಹ ಕೋರ್ಟಿಗೆ ಹಾಕಿದ್ದೇವೆ. ಬೆಂಗಳೂರಿಗೆ ಹೋಗಿ ಸಹಕಾರಿ ಜಂಟಿ ನಿಬಂಧಕರ ಕೋರ್ಟಿನಲ್ಲಿ ಹಾಲಿ, ಮಾಜಿ ಸಿಬ್ಬಂದಿಗೆ ಸಂಬಂಧಿಸಿ ವಿಶೇಷ ದೂರು ನೀಡಿದ್ದು, ವಿಚಾರಣೆ ನಡೆದಿದೆ. ರಾಜ್ಯ ಸರ್ಕಾರ ಸಹ ತನಿಖೆ ಮಾಡಲಿದೆ ಎಂದು ಸಚಿವರೇ ಹೇಳಿರುವದು ನಮಗೂ ಬೆಂಬಲ ಬಂದಂತಾಗಿದೆ. ಅಂತಾರಾಜ್ಯ ಕಾಯಿದೆಯಡಿ ತನಿಖೆ ಆಗಬಹುದು. 1 ಲಕ್ಷ ಸದಸ್ಯರ ಸಂಸ್ಥೆಯಾದ ಕ್ಯಾಂಪ್ಕೋದಿಂದ ಜನರಿಗೆ ಯಾವದೇ ಮೋಸ ಆಗಬಾರದು. ಅನ್ಯಾಯ ಆಗಬಾರದು. ನಾವು ಸಹ ಬಿಗು ನಿಲುವು ತಾಳಿದ್ದು, ಕಾನೂನಿನಂತೆ ಎಲ್ಲ ಕ್ರಮ ಆಗುತ್ತಿದೆ” ಎಂದರು.

“ಇದೊಂದು ಸೈಬರ್ ಮಾದರಿ ಅಪರಾಧವಾಗಿದೆ. ಇಲ್ಲಿ ಬ್ಯಾಂಕ್ ಸ್ಟೇಟ್ಮೆಂಟ್, ಕಂಪ್ಯೂಟರ್ ದಾಖಲೆ ಬದಲಾವಣೆ, ಪಾಸ್ ಬುಕ್ ತಿದ್ದುಪಡಿ, ಎಂಡಿ ಸೀಲ್ ಫೋರ್ಜರಿ ಸಹಿತ ಹಲವು ಅಪರಾಧವಾಗಿದೆ. ಇಂತಹ ವಿಷಯಕ್ಕೆ ಮೆಲ್ನೋಟಕ್ಕೆ ಗೊತ್ತಾಗುವದಿಲ್ಲ. ನಮಗೆ ಗೊತ್ತಾದ ತಕ್ಷಣ ಸಮಗ್ರ ಪರಿಶೀಲನೆ ಮಾಡಿ, ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಸಿಬ್ಬಂದಿ ಮೇಲೂ ಕ್ರಮ ಆಗಿದೆ” ಎಂದರು.

ಅಡಿಕೆ ಬೆಂಬಲ ಬೆಲೆ ವಿಸ್ತರಣೆಗೆ ಮನವಿ

“ಸಹಕಾರಿ ಪ್ರಮುಖರು ದೆಹಲಿಗೆ ಹೋಗಿ ಒತ್ತಡ ಹಾಕಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಅಡಿಕೆಗೆ ಬೆಂಬಲ ಬೆಲೆ ಘೋಷಿಸಿದ್ದು, ಅದನ್ನು ಡಿಸೆಂಬರ್ 31ರ ಬದಲು ಮೇ 31ರವರೆಗೂ ವಿಸ್ತರಿಸಲು ಮನವಿ ಮಾಡಿದ್ದೇವೆ. ಜೊತೆಗೆ ಹೊಸ ಅಡಿಕೆಗೂ ಬೆಂಬಲ ಬೆಲೆ ದರ ನೀಡಲು ಮನವಿ ಮಾಡಿದ್ದು, ಸಚಿವರು ಸಹಮತ ನೀಡಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ. ರಾಜ್ಯ ಸರ್ಕಾರದ ಮಹತ್ವದ ಸಭೆ ಸೋಮವಾರ, ಮಂಗಳವಾರ ನಡೆದಿದ್ದು, ಸದ್ಯವೇ ಸೂಕ್ತ ನಿರ್ಣಯ ಆಗಲಿದೆ ಎಂಬ ವಿಶ್ವಾಸವಿದೆ” ಎಂದು ಸತೀಶ್ಚಂದ್ರ ತಿಳಿಸಿದರು.

ಸ ಒಕೆ