ಸ್ಥಳೀಯ ಬೀಜಗಳ ಸಂರಕ್ಷಕಿ ಮಹಾರಾಷ್ಟ್ರದ ಈ ಮಹಿಳೆ

ರೈತರು ಬಿತ್ತನೆ ಬೀಜಗಳಿಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಿದರೆ ಸ್ಥಳೀಯ ಬೆಳೆಗಳು ಸಂಪೂರ್ಣ ನಾಶವಾಗುವುದು ನಿಶ್ಚಿತ

  • ಆಶ್ಲೇಷ ದೇವ್

ಕೃಷಿ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಿತ್ತನೆ ಬೀಜಗಳ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಬೀಜಗಳ ಸಂತತಿಯನ್ನು ರಕ್ಷಿಸಲು ಹೋರಾಡುತ್ತಿರುವ ಮಹಾರಾಷ್ಟ್ರದ ರಾಹಿಬಾಯಿ ಸೋಮಾ ಪೋಪೆರೆ ಮಹಾರಾಷ್ಟ್ರ ರಾಜ್ಯಾದ್ಯಂತ ಪ್ರವಾಸ ಮಾಡಿ ಸ್ಥಳೀಯ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ.

ಸ್ಥಳೀಯ ಬೆಳೆಗಳ ಮಾದರಿಗಳು ಬರಗಾಲ ಮತ್ತು ರೋಗಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದ್ದು, ಉತ್ತಮ ಪೌಷ್ಟಿಕಾಂಶ ಹೊಂದಿರುತ್ತವೆ ಹಾಗಾಗಿ ರಾಸಾಯನಿಕ ಔಷದಿಗಳಿಲ್ಲದೆಯೇ ಉತ್ತಮ ಫಲವತ್ತತೆ ಹೊಂದಿರುತ್ತದೆ ಎಂದು ರಾಹಿಬಾಯಿ ಹೇಳುತ್ತಾರೆ. ಈಗಾಗಲೇ ಸಾಕಷ್ಟು ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ರೈತರ ಶೋಷಣೆಯನ್ನು ತಡೆಗಟ್ಟಬೇಕಾದರೆ ಸ್ಥಳೀಯ ಬಿತ್ತನೆ ಬೀಜಗಳು ಮತ್ತು ಬೆಳೆ ಮಾದರಿಗಳನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದು ರಾಹಿಬಾಯಿ ಹೇಳುತ್ತಾರೆ.

ರೈತರು ಬಿತ್ತನೆ ಬೀಜಗಳಿಗಾಗಿ ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಿದರೆ ಸ್ಥಳೀಯ ಬೆಳೆಗಳು ಸಂಪೂರ್ಣ ನಾಶವಾಗುವುದು ನಿಶ್ಚಿತ ಹಾಗಾಗಿ ಬೀಜ ಸಂರಕ್ಷಣೆ ನಮ್ಮ ಆದ್ಯತೆಯಾಗಲಿ ಎಂಬ ಉದ್ದೇಶದಿಂದ ರಾಹಿಬಾಯಿ ಏಕಾಂಗಿಯಾಗಿಯೇ ತಮ್ಮ ಅಂದೋಲನ ಹಮ್ಮಿಕೊಂಡಿದ್ದಾರೆ.

ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಯ ನೆರವಿನಿಂದ ತಮ್ಮ ಕೈಂಕರ್ಯ ಮುಂದುವರೆಸಿರುವ ರಾಹಿಬಾಯಿ ನಾಲ್ಕು ಹಂತಗಳಲ್ಲಿ ಭತ್ತ ಬೆಳೆಯುವ ನೂತನ ವಿಧಾನವನ್ನೂ ಕಂಡುಹಿಡಿದಿದ್ದಾರೆ. ಈ ನೂತನ ಮಾದರಿಯನ್ನು ಅನುಸರಿಸಿ ರಾಹಿಬಾಯಿ ಶೇ 30ರಷ್ಟು ಹೆಚ್ಚಿನ ಇಳುವರಿ ಪಡೆದಿದ್ದಾರೆ. ತಾವು ಅನುಭವದ ಮೂಲಕ ಸಂಪಾದಿಸಿದ ಜ್ಞಾನವನ್ನು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೀಜಗಳ ಆಯ್ಕೆಯ ಬಗ್ಗೆ ತರಬೇತಿ ನೀಡುವ ಮೂಲಕ ರಾಹಿಬಾಯಿ ಸಮರ್ಥವಾಗಿ ಬಳಸುತ್ತಿದ್ದಾರೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ತಂತ್ರಗಳನ್ನೂ ಭೋದಿಸುತ್ತಿದ್ದಾರೆ. ಮಹಾರಾಷ್ಟ್ರದ ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಸಮಿತಿಯ ಮಾಜಿ ನಿರ್ದೇಶಕ ರಘುನಾತ್ ಅನಂತ್ ಮಶೇಲ್ಕರ್ ಈಗೆ ಬಿತ್ತನೆ ಬೀಜಗಳ ಮಹಾಮಾತೆ ಎಂಬ ಗೌರವ ಸಮರ್ಪಿಸಿ ಸನ್ಮಾನಿಸಿದ್ದಾರೆ.

ಸ್ಥಳೀಯ ಬೆಳೆ ವಿಧಾನಗಳನ್ನು ಅನುಸರಿಸುವುದರಿಂದ ಉಂಟಾಗುವ ಲಾಭವನ್ನು ರೈತರಿಗೆ ಮನದಟ್ಟು ಮಾಡಲು ಸದಾ ಶ್ರಮಿಸುತ್ತಿರುವ ರಾಹಿಬಾಯಿ ಬೀಜ ನಿಧಿ ಸಹ ಸ್ಥಾಪಿಸಿದ್ದಾರೆ. ಸಮುದಾಯದ ಸದಸ್ಯರು ಈ ನಿಧಿಯ ನಿರ್ವಹಣೆ ಮಾಡುತ್ತಿದ್ದಾರೆ. ತಾವು ಈ ನಿಧಿಯಿಂದ ಪಡೆದ ಬೀಜದ ಎರಡು ಪಟ್ಟು ಪ್ರಮಾಣವನ್ನು ರೈತರು ಹಿಂದಿರುಗಿಸಬೇಕಾಗುತ್ತದೆ. 32 ವಿಭಿನ್ನ ಬೆಳೆಗಳ 122 ಮಾದರಿಯ ಬೀಜಗಳನ್ನು ಇಲ್ಲಿ ವಿತರಿಸಲಾಗುತ್ತದೆ.