ಈ ಖಳನಟನೇ ವರ್ಷದ ರಿಯಲ್ ಹೀರೋ !

ಕನ್ನಡ ಸಿನಿಮಾರಂಗದಲ್ಲೀಗ ಹೊಸ ಹೀರೋ ಹುಟ್ಟಿಕೊಂಡಿದ್ದಾನೆ. ಹಾಗಂತ ಇವರು ತೆರೆಯ ಮೇಲೇನೂ ನಾಯಕರಲ್ಲ. ಹೀರೋನಿಂದ ಒದೆ ತಿನ್ನುವ ವಿಲನ್. ಇವರು ಬೇರ್ಯಾರೂ ಅಲ್ಲ, `ಆರ್ಮುಗಂ’ ಖ್ಯಾತಿಯ ರವಿಶಂಕರ್. ಹೌದು ತೆರೆಯ ಮೇಲೆ ಹೀರೋ ಆಗಿರುವ ಶಿವರಾಜ ಕುಮಾರ, ಪುನೀತ್, ಸುದೀಪ್, ದರ್ಶನ್, ಯಶ್, ಗಣೇಶ್ ಮೊದಲಾದವರ ಚಿತ್ರ ವರ್ಷದಲ್ಲಿ ಒಂದೋ ಎರಡೋ ತೆರೆಕಂಡರೆ ಈ ರಿಯಲ್ ಹೀರೋ ರವಿಶಂಕರ್ ಈ ವರ್ಷ ಕಡಿಮೆಯೆಂದರೂ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಎಲ್ಲಾಹೀರೋಗಳ ಚಿತ್ರಗಳಿಗೂ ರವಿಶಂಕರ್ ಬೇಕು. ಅವರ ಗತ್ತು ಗೈರತ್ತು, ಕಂಚಿನ ಕಂಠ ಚಿತ್ರಕ್ಕೊಂದು ನಿಜವಾದ ಕಳೆ ಕೊಡುವುದಂತೂ ಸತ್ಯ. ರವಿಶಂಕರ್ ಆ ಕಾಲದಲ್ಲಿ ವಿಲನ್ ಆಗಿ ಮೆರೆದ ವಜ್ರಮುನಿ ಸ್ಥಾನವನ್ನೀಗ ಅಲಂಕರಿಸಿದ್ದಾರೆ. ರವಿಶಂಕರ್ ಈ ವರ್ಷ `ಭಲೇ ಜೋಡಿ’, `ಜಗ್ಗು ದಾದಾ’, `ಜಿಗರ್ ಥಂಡಾ’, `ಕೋಟಿಗೊಬ್ಬ 2′, `ಮುಂಗಾರು ಮಳೆ 2′, `ದೊಡ್ಮನೆ ಹುಡ್ಗ’, `ಅಪೂರ್ವ’ `ಮುಕುಂದ ಮುರಾರಿ’, `ಸಂತು ಸ್ಟ್ರೈಟ್ ಫಾರ್ವರ್ಡ್’, `ನಟರಾಜ ಸರ್ವೀಸ್’ ಮೊದಲಾದ ಚಿತ್ರಗಳಲ್ಲಿ ರವಿಶಂಕರ್ ಅಭಿನಯಿಸಿದ್ದರು. ರವಿಶಂಕರ್ ನಂತರ ಈ ವರ್ಷ ಅತ್ಯಂತ ಹೆಚ್ಚು ಕೆಲಸ ಮಾಡಿದ್ದು ಕಾಮಿಡಿ ನಟರಾದ ಅಚ್ಯುತ್ ಕುಮಾರ್, ಚಿಕ್ಕಣ್ಣ, ರಂಗಾಯಣ ರಘು ಮತ್ತು ಸಾಧು ಕೋಕಿಲ. ಇವರು ಏನಿಲ್ಲವೆಂದರೂ ಕನಿಷ್ಟ ಎಂಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಂತೂ ಹೀರೋ, ಹೀರೋಯಿನ್‍ಗಿಂತ ಈಗ ವಿಲನ್, ಕಾಮಿಡಿ ನಟರಿಗೇ ಬೇಡಿಕೆ ಹೆಚ್ಚಾಗುತ್ತಿದೆ.