ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ನಡುವೆ 2ನೇ ಟೆಸ್ಟ್

  • ಎಸ್ ಜಗದೀಶ್ಚಂದ್ರ ಅಂಚನ್

ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನಿನಲ್ಲಿ ಇಂದಿನಿಂದ ದ್ವಿತೀಯ ಟೆಸ್ಟ್ ಪಂದ್ಯವನ್ನು ಆಡಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಬಹು ಪ್ರಮುಖವಾಗಿದೆ.

ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದದೇ ಆದಲ್ಲಿ ಭಾರತೀಯ ತಂಡದ ಸತತ ಟೆಸ್ಟ್ ಪಂದ್ಯಗಳ ಸರಣಿ ವಿಜಯಕ್ಕೆ ತಡೆ ಬೀಳಲಿದೆ. ಸತತ ಎಂಟು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಭಾರತೀಯ ತಂಡ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತಿದೆ. ಕೇಪ್ ಟೌನಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ನುಗಳ ವೈಫಲ್ಯದಿಂದ ತಂಡಕ್ಕೆ ಸೋಲಾಗಿತ್ತು.

ಆದರೆ, ದ್ವಿತೀಯ ಪಂದ್ಯದಲ್ಲಿ ಸೋಲಿನ ಛಾಯೆಯಿಂದ ಭಾರತೀಯ ತಂಡ ಹೊರ ಬರಬೇಕಾಗಿದೆ. ಮೇಲ್ನೋಟಕ್ಕೆ ಇದು ಅಸಾಧ್ಯ ಆಗಿದೆ. ಏಕೆಂದರೆ ಸೆಂಚೂರಿಯನ್ ಕ್ರಿಕೆಟ್ ಮೈದಾನ ವೇಗದ ಬೌಲರುಗಳಿಗೆ ಹೆಚ್ಚು ಸಹಾಯವಾಗಲಿದೆ. ದಕ್ಷಿಣ ಆಫ್ರಿಕನ್ ಬೌಲರುಗಳು ಆತಿಥೇಯ ಮೈದಾನದಲ್ಲಿ ತಮ್ಮ ಉರಿ ಚೆಂಡಿನ ಮೆರೆದಾಟಕ್ಕೆ ಸಜ್ಜಾಗಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ರಿಕನ್ ವೇಗದ ಬೌಲರುಗಳಾದ ಫಿಲಾಂಡರ್, ರಬಾಡ, ಮೊರ್ಕೆಲ್ ಹಾಗೂ ಡೇಲ್ ಸ್ಟೇನ್ ಭಾರತೀಯ ಬ್ಯಾಟ್ಸ್ಮನ್ನುಗಳಿಗೆ ಸಿಂಹಸ್ವಪ್ನರಾಗಿದ್ದರು. ಅದರಲ್ಲೂ ಫಿಲಾಂಡರ್ ದ್ವಿತೀಯ ಇನ್ನಿಂಗ್ಸಿನಲ್ಲಿ ಮಾರಕ ಬೌಲಿಂಗ್ ನಡೆಸಿ ಭಾರತದ ಪ್ರಮುಖ ಆರು ವಿಕೆಟುಗಳನ್ನು ಪಡೆದು ಗೆಲುವಿನ ರೂವಾರಿಯಾಗಿದ್ದರು.

ಭಾರತ ಈಗ ಸರಣಿ ಸೋಲನ್ನು ತಪ್ಪಿಸಲು ತಂಡದಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ಆಡುವುದು ಬಹುತೇಕ ಖಚಿತವಾಗಿದೆ. ಇದಕ್ಕಾಗಿ ಆರಂಭಿಕ ಆಟಗಾರ ಶಿಖರ್ ಧವನ್ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇನ್ನೂ ಅನುಭವಿ ಬೌಲರ್ ಇಶಾಂತ್ ಶರ್ಮ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ಮುಖ್ಯವಾಗಿ ಭಾರತೀಯ ತಂಡದ ಆಟಗಾರರೆಲ್ಲರೂ ತಮ್ಮ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ಈ ರೀತಿ ಎಲ್ಲರೂ ಎಚ್ಚರಿಕೆಯಿಂದ ಆಟವಾಡಿದರೆ ಮಾತ್ರ ಈ ಸರಣಿಯಲ್ಲಿ ಪ್ರಭುತ್ವ ಸ್ಥಾಪಿಸಲು ಸಾಧ್ಯ. ಹಾಗಾಗಿ ಇಂದಿನಿಂದ ಆರಂಭವಾಗುವ ದ್ವಿತೀಯ ಟೆಸ್ಟ್ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.

 

LEAVE A REPLY