ಮದುವೆಗೆ ಮುಂಚೆ ಸಂಗಾತಿಗೆ ಕೇಳಲೇಬೇಕಾದ 6 ಪ್ರಶ್ನೆ

ಅಂತಿಮವಾಗಿ ಪ್ರೀತಿಯಿಂದ ಹೊಂದಾಣಿಕೆಯೊಂದಿಗೆ ಕೆಲವೊಮ್ಮೆ ಇಷ್ಟವಿಲ್ಲದೇ ಹೋದರೂ ಕೆಲವು ಸಂದರ್ಭಗಳಲ್ಲಿ ರಾಜಿ ಸೂತ್ರದೊಂದಿಗೆ ಜೀವನ ನಡೆಸಿ. ಪರ್ಫೆಕ್ಟ್ ಸಂಗಾತಿ ಕೇವಲ ರೊಮಾನ್ಸ್ ಕಾದಂಬರಿಗಳಲ್ಲಿ ಮಾತ್ರ ಕಾಣಸಿಗುತ್ತಾನೆ ಇಲ್ಲವೇ ಕಾಣಸಿಗುತ್ತಾಳೆಂಬುದನ್ನು ಅರಿತುಕೊಂಡು ನಡೆದರೆ ಬಾಳ ದೋಣಿಯೂ ಹಾಯಾಗಿ ಮುಂದೆ ಸಾಗುವುದು.

ಜನರು ಮದುವೆಯಾಗುವಾಗ ಜೀವನಪೂರ್ತಿ ಜತೆಯಾಗಿರುವುದಾಗಿ, ಕಷ್ಟ ಸುಖಗಳಲ್ಲಿ ಸಹಭಾಗಿಗಾಳಗುವುದಾಗಿ  ಮಾತು ನೀಡುತ್ತಾರೆ. ಆದರೆ ವಿವಾಹವಾದ ನಂತರದ ವರ್ಷಗಳಲ್ಲಿ ಸತಿಪತಿಗಳು ಒಂದೋ  ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಅನ್ಯೋನ್ಯವಾಗಿರುತ್ತಾರೆ ಇಲ್ಲವೇ ದೂರ ದೂರವಾಗಿ ಬಿಡುತ್ತಾರೆ. ವಿವಾಹವಾದ  ನಂತರ ಸತಿಪತಿಗಳ ಸಂಬಂಧ ಅತಿ ಮಧುರವಾಗಿರುವಂತೆ ನೋಡಿಕೊಳ್ಳಲು ಕೆಲವು ಟಿಪ್ಸ್ ಶೇರ್ ಮಾಡಿದ್ದಾರೆ ಫೂಟ್ ಲೂಸ್ ನೋ ಮೋರ್. ಕಾಂ ಇದರ ಸಹ ಸ್ಥಾಪಕಿ ವರ್ಷಾ ವಧ್ಯರ್.

ಮದುವೆಯ ನಂತರ ಪಶ್ಚಾತ್ತಾಪಪಡುವುದಕ್ಕಿಂತ ಮದುವೆಗಿಂತ ಮೊದಲೇ ಕೆಲ ವಿಚಾರಗಳನ್ನು ಚರ್ಚಿಸಿದರೆ ಉತ್ತಮ ಎನ್ನುತ್ತಾರವರು. “ಮದುವೆಯಾಗುವ ಮುಂಚೆಯೇ ಇದೆಲ್ಲಾ ನನಗೆ ಗೊತ್ತಿರಬೇಕಿತ್ತು”, “ನಾನು ಯಾರನ್ನೋ ಮದುವೆಯಾಗಿದ್ದೇನೆ ಎಂದು ಎನಿಸುತ್ತದೆ” ಎಂದು ಹೇಳುವವರಿಗೆ ಕೊರತೆಯಿಲ್ಲ.

ಹಾಗಾಗಬಾರದೆಂದಾದರೆ ಮದುವೆಯ ಮೊದಲೇ ಕೇಳಬೇಕಾದ ಪ್ರಶ್ನೆಗಳೇನು ? ಇಲ್ಲಿವೆ ಓದಿ.

  • ನಿಮಗೆ ನಿಜವಾಗಿಯೂ ಮದುವೆಯಾಗಬೇಕೆಂಬ ಇಚ್ಛೆಯಿದೆಯೇ ?

ಆಕೆ ಅಥವಾ ಆತನಿಗೆ ನಿಮ್ಮನ್ನು ವಿವಾಹವಾಗಲು ಮನಸ್ಸಿದೆಯೇ ಹಾಗೂ ಈ ವಿವಾಹಕ್ಕೆ ಅವರ ಪೂರ್ಣಸಮ್ಮತಿಯಿದೆಯೇ ಎಂದು ತಿಳಿದುಕೊಳ್ಳುವ ಸಲುವಾಗಿ ಈ ಪ್ರಶ್ನೆ ಕೇಳುವುದು ಅತೀ ಅಗತ್ಯವಾಗಿದೆ.

  • ನೀವೆಲ್ಲಿ ವಾಸ್ತವ್ಯ ಹೂಡುತ್ತೀರಿ ?

ನಿಮ್ಮ ಅತ್ತೆ, ಮಾವನ ಜತೆಗೆಯೇ ಅಥವಾ ಅವರಿಂದ ಪ್ರತ್ಯೇಕವಾಗಿಯೇ ಎಂದು ಮೊದಲೇ ತಿಳಿದುಕೊಳ್ಳಬೇಕು ಹಾಗೂ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದಲ್ಲಿ ಇಬ್ಬರಿಗೂ ಪೂರ್ಣ ಸಹಮತವಿರಬೇಕು.

  • ಯಾರು ಹಣ ಉಳಿತಾಯ ಮಾಡುವುದು ? ಖರ್ಚನ್ನು ಯಾರು ನಿಭಾಯಿಸುತ್ತಾರೆ ?

ಮದುವೆಯಾಗಲು ನಿರ್ಧರಿಸಿದ್ದೀರಾದರೆ ಮುಂದೆ ಜೀವನ ನಿಭಾಯಿಸಲು ಬೇಕಾದ ಖರ್ಚುವೆಚ್ಚಗಳ ಬಗ್ಗೆಯೂ ಚರ್ಚಿಸಿ. ಈ ವಿಚಾರ  ಎತ್ತಲು ಮುಜುಗರವಾಗುವುದಾದರೂ  ಹಣಕಾಸಿನ ವಿವಾದಗಳೇ ಹೆಚ್ಚಿನ ವಿವಾಹಗಳು ಅಂತ್ಯಗೊಳ್ಳಲು ಕಾರಣವೆಂಬುದನ್ನು ಮರೆಯಬೇಡಿ.

  • ನಿಮ್ಮ ಗುರಿಯೇನು ?

ಈ ಪ್ರಶ್ನೆ ಸ್ವಲ್ಪ ಬಾಲಿಶ ಎಂದು ಕಂಡರೂ ಇದನ್ನು ಬಾಳ ಸಂಗಾತಿಗಳಾಗುವವರು ಒಬ್ಬರಿಗೊಬ್ಬರು ಕೇಳಲೇ ಬೇಕು. ಮುಂದಿನ ಕೆಲ ವರ್ಷಗಳಲ್ಲಿ ನೀವೇನು ಮಾಡಬಯಸುತ್ತೀರಿ ? ಉತ್ತಮ ಉದ್ಯೋಗ ಅಥವಾ ಉನ್ನತ ಶಿಕ್ಷಣ ? ಈ ವಿಚಾರದಲ್ಲಿ ಇಬ್ಬರಲ್ಲೂ ಹೊಂದಾಣಿಕೆಯಾದರೆ ಇನ್ನೂ ಉತ್ತಮ.

  • ಮಕ್ಕಳು

ಬಾಳಸಂಗಾತಿಗಳಾಗುವವರು ಮುಂದೆ ತಮಗೆ ಹುಟ್ಟಬಹುದಾದ ಮಕ್ಕಳ ಬಗ್ಗೆಯೂ ಮೊದಲೇ ಚರ್ಚಿಸಬೇಕು. ತಮಗೆಷ್ಟು ಮಕ್ಕಳು ಬೇಕು ? ಮಗುವನ್ನು ನೋಡಿಕೊಳ್ಳಲು ಇಬ್ಬರಲ್ಲಿ ಒಬ್ಬರು ನೌಕರಿ ತ್ಯಜಿಸುವರೇ ಎಂಬಿತ್ಯಾದಿ ಪ್ರಶ್ನೆಗಳೂ ಬಹಳ ಮುಖ್ಯ.

( ಧಾರ್ಮಿಕ ವಿಚಾರಗಳನ್ನೂ ಪ್ರಸ್ತಾಪಿಸಿ

ನಿಮ್ಮ ಸಂಗಾತಿಯಾಗುವವನ ಅಥವಾ ಆಗುವವಳ ಧಾರ್ಮಿಕ ಆಸಕ್ತಿಗಳ ಬಗ್ಗೆ ವಿವಾಹದ ಮೊದಲೇ ತಿಳಿದುಕೊಳ್ಳಿ. ಇಲ್ಲದೇ ಹೋದಲ್ಲಿ ಒಂದು ಭಾನುವಾರ ಬೆಳಿಗ್ಗೆ ಆತ ಅಥವಾ ಆಕೆ ಸತ್ಸಂಗ ಕಾರ್ಯಕ್ರಮಕ್ಕೆ ಹೋಗುವ ಎಂದು ಹೇಳಿದರೆ ನೀವು ತಲೆಕೆರೆದುಕೊಳ್ಳಬೇಕಾದೀತು.

ಕೆಲವರು ವಿವಾಹದ ಮೊದಲೇ ತಮಗೆ ಸಿಗರೇಟ್, ಮದ್ಯ ಮುಂತಾದವುಗಳನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಹೀಗೆ ನಿಮ್ಮ ಬಾಳಸಂಗಾತಿಯಿಂದ ಏನನ್ನು ನಿರೀಕ್ಷಿಸಬೇಕು ಅಥವಾ ನಿರೀಕ್ಷಿಸಬಾರದು ಎಂದು ಅರಿತುಕೊಂಡಲ್ಲಿ ಮುಂದೆ ನಿರಾಸೆಯುಂಟಾಗುವ ಸಂಭವ ಕಡಿಮೆ.

ಅಂತಿಮವಾಗಿ ಪ್ರೀತಿಯಿಂದ ಹೊಂದಾಣಿಕೆಯೊಂದಿಗೆ ಕೆಲವೊಮ್ಮೆ ಇಷ್ಟವಿಲ್ಲದೇ ಹೋದರೂ ಕೆಲವು ಸಂದರ್ಭಗಳಲ್ಲಿ ರಾಜಿ ಸೂತ್ರದೊಂದಿಗೆ ಜೀವನ ನಡೆಸಿ.  ಪರ್ಫೆಕ್ಟ್ ಸಂಗಾತಿ ಕೇವಲ ರೊಮಾನ್ಸ್ ಕಾದಂಬರಿಗಳಲ್ಲಿ ಮಾತ್ರ ಕಾಣಸಿಗುತ್ತಾನೆ ಇಲ್ಲವೇ ಕಾಣಸಿಗುತ್ತಾಳೆಂಬುದನ್ನು ಅರಿತುಕೊಂಡು ನಡೆದರೆ ಬಾಳ ದೋಣಿಯೂ ಹಾಯಾಗಿ ಮುಂದೆ ಸಾಗುವುದು.