ಆನೆಗುಡ್ಡೆ ದೇವಳದಿಂದ ಚಿನ್ನಾಭರಣ ಎಗರಿಸಿದ ತಂಡ ಪೊಲೀಸ್ ಬಲೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆಯ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಪಹರಿಸಿ ವಾಹನದಲ್ಲಿ ಪರಾರಿಯಾದ ಕಳ್ಳರನ್ನು ಶುಕ್ರವಾರ ಮುಂಜಾನೆ ಚಿಕ್ಕಮಗಳೂರಿನಲ್ಲಿ ವಾಹನ ಸಮೇತ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಶಾರದಾ, ರವಿ ಗೌಸ್, ಪುನೀತ್, ರಾಜು, ಲಕ್ಕಮ್ಮ, ದಾಕ್ಷಾಯಿಣಿ, ನೇತ್ರಾ, ಗಂಗಮ್ಮ ಮತ್ತು ಶ್ರುತಿ. ಉಳಿದ ಆರೋಪಿಗಳ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ.

ಆರೋಪಿಗಳೆಲ್ಲರೂ ಹಾವೇರಿ ಮೂಲದವರು. ಹಾವೇರಿ ನೋಂದಣಿಯ ಮ್ಯಾಕ್ಸಿ ಕ್ಯಾಬಿನಲ್ಲಿ ಒಟ್ಟು ಹದಿನೇಳು ಜನರಿದ್ದು, ಅದರಲ್ಲಿ ನಾಲ್ವರು ಗಂಡಸರು, ಏಳು ಮಹಿಳೆಯರು ಹಾಗೂ ಉಳಿದ ಆರು ಜನ ಮಕ್ಕಳು  ಪ್ರವಾಸ ನಿಮಿತ್ತ ದೇಗುಲಕ್ಕೆ ಆಗಮಿಸಿದ್ದರು. ನೂಕುನುಗ್ಗಲು ಸೃಷ್ಟಿಸಿ ಮಹಿಳೆಯರ ಬ್ಯಾಗಿನಿಂದ ಚಿನ್ನ, ನಗದು ಹಣ ಕಳವು ಮಾಡುವ ದಂಧೆ ನಡೆಸುತ್ತಿದ್ದರು.

ಬೆಂಗಳೂರಿನ ಜ್ಯೋತಿ ಬುಧವಾರ ಕೊಲ್ಲೂರಿನಲ್ಲಿ ನಡೆದ ಮದುವೆಗೆ ಬಂದವರು ಗುರುವಾರ ಆನೆಗುಡ್ಡೆ ದೇವಳಕ್ಕೆ ಬಂದಿದ್ದು ಪೂಜೆಯ ನಂತರ ಆರತಿ ತೆಗೆದುಕೊಳ್ಳುವಾಗ ನಾಲ್ವರು ಮಹಿಳೆಯರನ್ನು ಒಳಗೊಂಡ ಅಪರಿಚಿತರು ಬ್ಯಾಗಿನ ಜಿಪ್ ತೆಗೆದು ಚಿನ್ನಾಭರಣಗಳನ್ನು ಅಪಹರಿಸಿದ್ದರು. ಎರಡು ಚಿನ್ನದ ಸರಗಳು, ಒಂದು ನೆಕ್ಲೇಸ್, ಒಂದು ಬಳೆಯನ್ನೊಳಗೊಂಡಂತೆÉ ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳಿದ್ದವು ಎಂದು ಕುಂದಾಪುರ ಠಾಣೆಗೆ ದೂರು ನೀಡಿದ್ದರು.

ದೇವಸ್ಥಾನದಿಂದ ಗಡಿಬಿಡಿಯಲ್ಲಿ ತೆರಳಿದ ವಾಹನವನ್ನು ಕಂಡು ಶಂಕೆಗೊಂಡ ಸ್ಥಳೀಯರೊಬ್ಬರು ವಾಹನದ ನಂಬರನ್ನು ನೋಟ್ ಮಾಡಿಕೊಂಡಿದ್ದು, ಪೊಲೀಸರಿಗೆ ಮುಟ್ಟಿಸಿದ್ದರು. ಇದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪೊಲೀಸರು ಮ್ಯಾಕ್ಸಿ ಕ್ಯಾಬ್ ತಡೆದು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಕುಂದಾಪುರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವುದಕ್ಕಾಗಿ ಚಿಕ್ಕಮಗಳೂರಿಗೆ ತೆರಳಿದ್ದಾರೆ.