ಮನೆಮಂದಿಯ ಕಟ್ಟಿ ನಿಧಿ ಹುಡುಕಿದ ಚೋರರು

ಮನೆಪಕ್ಕದಲ್ಲಿ ನಿಧಿಗಾಗಿ ಅಗೆದಿರುವುದು

ತಲವಾರು, ಪಿಸ್ತೂಲು ತೋರಿಸಿ ಮಾವ, ಅಳಿಯಗೆ ಬೆದರಿಸಿದ 6 ಮಂದಿ ತಂಡ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮುಸುಕುಧಾರಿಗಳ ತಂಡವೊಂದು ತಲವಾರು ಮತ್ತು ಪಿಸ್ತೂಲು ತೋರಿಸಿ ಮನೆಯವರನ್ನು ಕಟ್ಟಿಹಾಕಿದ ಬಳಿಕ ಗೇಟಿನ ಪಕ್ಕ ನಿಧಿಗಾಗಿ ಶೋಧ ನಡೆಸಿ ಪರಾರಿಯಾದ ಘಟನೆ ಮಂಗಳವಾರ ಮುಂಜಾನೆ ಕರೋಪಾಡಿ ಗ್ರಾಮದಲ್ಲಿ ನಡೆದಿದೆ.

ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡ ಚೋರರು ಎರಡು ಗಂಟೆಗಳ ಕಾಲ ನಿಧಿಗಾಗಿ ನೆಲ ಅಗೆದಿದ್ದು, ದುಷ್ಕರ್ಮಿಗಳ ತಂಡದಲ್ಲಿ ಸ್ಥಳೀಯರೊಂದಿಗೆ ಕೇರಳದವರು ಕೈಜೋಡಿಸಿದ ಮಾಹಿತಿ ಲಭ್ಯವಾಗಿದೆ.

ಚೋರರು ದಾಳಿಯಿಟ್ಟ ಅರಸಳಿಕೆಯ ಮನೆ
ಚೋರರು ದಾಳಿಯಿಟ್ಟ ಅರಸಳಿಕೆಯ ಮನೆ

ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿನ ಕೃಷಿಕ ವಿಘ್ನರಾಜ ಭಟ್ಟ(42)ರ ಮನೆಗೆ ಮಂಗಳವಾರ ಮುಂಜಾನೆ 2.40ರ ಸುಮಾರಿಗೆ ನಿಧಿ ಚೋರರು ದಾಳಿಯಿಟ್ಟಿದ್ದು, ಜೋರಾಗಿ ನಾಯಿ ಬೊಗಳುವುದನ್ನು ಕೇಳಿಸಿಕೊಂಡ ಭಟ್ಟರು ನಿದ್ದೆಯಿಂದೆದ್ದು ಕಿಟಕಿಯಲ್ಲಿ ನೋಡಿದಾಗ ಅಂಗಳದಲ್ಲಿ ಮೂವರು ಮುಸುಕುಧಾರಿ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ ನಿಂತಿದ್ದರೆನ್ನಲಾಗಿದೆ. ಬೆದರಿದ ಭಟ್ಟರು ಪಕ್ಕದಲ್ಲೇ ನಿದ್ದೆ ಮಾಡಿದ್ದ ತನ್ನ ಅಳಿಯ ವಿಖ್ಯಾತ(20)ನನ್ನು ಎಚ್ಚರಿಸುತ್ತಿದ್ದಂತೆ ಅಪರಿಚಿತರು ಬಾಗಿಲು ತೆರೆಯುವಂತೆ ತಾಕೀತು ಮಾಡಿದ್ದರು. ತಕ್ಷಣವೇ ಭಟ್ಟರು ಮತ್ತು ಅಳಿಯ “ಕಳ್ಳರೋ ಕಳ್ಳರು” ಎಂದು ಬೊಬ್ಬೆ ಹೊಡೆಯುತ್ತಿದ್ದಂತೆ ಬಾಗಿಲು ಮುರಿದು ಒಳನುಗ್ಗಿದ ಅಪರಿಚಿತರು ತಲವಾರು ಮತ್ತು ಪಿಸ್ತೂಲ್ ತೋರಿಸಿ ಬೊಬ್ಬೆ ಹೊಡೆಯದಂತೆ ಎಚ್ಚರಿಕೆ ನೀಡುತ್ತಾ ನಮ್ಮಿಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿದ್ದರೆಂದು ಭಟ್ಟರು ವಿವರಿಸಿದರು.

ಪ್ರಾಣ ಭಯದಿಂದ ಸುಮ್ಮನಾಗಿದ್ದ ಭಟ್ಟರ ಕೈಯಲಿದ್ದ ಮೊಬೈಲ್ ಕಿತ್ತುಕೊಂಡ ದುಷ್ಕರ್ಮಿಗಳು ಸೀಸಿಟೀವಿಯ ಡಿವಿಆರ್ ತೋರಿಸುವಂತೆ ಹೇಳಿದ್ದು, ಡಿವಿಆರ್ ಮತ್ತು ಮೊಬೈಲ್ ಸಿಮ್ ಕಾರ್ಡನ್ನು ತೆಗೆದುಕೊಂಡ ಮೂವರು ದುಷ್ಕರ್ಮಿಗಳು ಅಳಿಯ ಮತ್ತು ಭಟ್ಟರನ್ನು ಮನೆಯೊಳಗೆ ಕೂಡಿ ಹಾಕಿ ತಮ್ಮ ಸಹಚರರಿಗೆ ನಿಧಿ ಅಗೆಯುವಂತೆ ಹೇಳಿದ್ದಾರೆನ್ನಲಾಗಿದೆ.

ಸುಮಾರು 8 ಜನರ ತಂಡ ಮನೆಯ ಗೇಟಿನ ಬಲಬದಿಯಲ್ಲಿನ ಎತ್ತರದ ದಿಬ್ಬವನ್ನು ಮುಂಜಾನೆ 4.35ರವರೆಗೂ ಅಗೆದಿದ್ದಾರೆ. ಅದೇ ಸಮಯಕ್ಕೆ ಮನೆ ಮುಂದಿನ ರಸ್ತೆಯಲ್ಲಿ ಅದ್ಯಾವುದೋ ವಾಹನ ಬಂದಿದ್ದರಿಂದಾಗಿ ಚೋರರು ಎರಡು ಕಾರುಗಳಲ್ಲಿ ಪರಾರಿಯಾದರೆಂದು ಭಟ್ಟರು ವಿವರಿಸಿದ್ದಾರೆ.

ಕನ್ಯಾನ-ಕುಡ್ಪುಲ್ತಡ್ಕ ಸಂಪರ್ಕ ರಸ್ತೆಯ ಬದಿಯಲ್ಲಿರುವ ವಿಘ್ನರಾಜ ಭಟ್ಟರ ಮನೆ ಮುಂದಿನ ಎತ್ತರದ ದಿಬ್ಬದಲ್ಲಿ ನಿಧಿಯಿದೆಯೆಂಬ ಅಂತೆ ಕಂತೆಗಳ ಪುರಾಣ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಗಂಟು ಇರುವುದು ನಿಜವೇ ?

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ, ಬಂಟ್ವಾಳ ಡಿವೈಎಸ್ಪಿ, ಸಿಪಿಐ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸುದ್ದಿ ಹಬ್ಬುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನ ಅಂತೆ ಕಂತೆಗಳ ಪುರಾಣ ಹುಟ್ಟುಹಾಕಿದ್ದಾರೆ. ಅರಸರ ಆಳ್ವಿಕೆಯ ಕಾಲದಲ್ಲಿ ಅರಸಳಿಕೆ ಜಮೀನು ವಿಟ್ಲ ಅರಮನೆ ಕುಟುಂಬಕ್ಕೆ ಸೇರಿದ್ದಾಗಿದ್ದು, ಇದೀಗ ವಿಘ್ನರಾಜ ಭಟ್ಟರ ಗೇಟಿನ ಪಕ್ಕದಲ್ಲಿ ನಿಧಿಯಿದೆಯೆಂದು ಹೇಳಲಾಗುತ್ತಿದೆ.

ಮಂಗಳವಾರ ಮುಂಜಾನೆ ಚೋರರು ಅಗೆದ ಸ್ಥಳದಲ್ಲಿ ಕೆಲವು ದಶಕಗಳ ಹಿಂದೆ ಕೊಪ್ಪರಿಗೆಯ ಕೈ ಕಾಣುತ್ತಿತ್ತೆಂದು ಹೇಳಲಾಗುತ್ತಿದ್ದರೂ ಅಂದು ನೋಡಿದ ಯಾವೊಬ್ಬನೂ ಇದೀಗ ಬದುಕುಳಿದಿಲ್ಲವಾಗಿದೆ. ಇದೇ ಅಂತೆ ಕಂತೆಗಳ ಸುದ್ದಿಗೆ ಮತ್ತೊಂದಿಷ್ಟು ಮಸಾಲೆ ಸೇರಿಸುತ್ತಿರುವ ಜನರಿಂದಾಗಿ ಕಳೆದೆರಡು ತಿಂಗಳಲ್ಲಿ 6 ಬಾರಿ ಭಟ್ಟರ ಜಮೀನಿನಲ್ಲಿ ನಿಧಿಚೋರರು ಹುಡುಕಾಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಭಟ್ಟರು ಸೀಸಿಟೀವಿ ಹಾಕಿದ್ದರೂ ಇದೀಗ ಮತ್ತೆ ಅರಸಳಿಕೆ ನಿಧಿ ಪುರಾಣ ಮೈಕೊಡವಿ ನಿಂತಿದೆ.

ಭಟ್ಟರ ಅಂಗಳದಲ್ಲಿ ಸಾಕಷ್ಟು ಅಡಿಕೆಯಿದ್ದರೂ ನಿಧಿ ಚೋರರು ಮುಟ್ಟದಿರುವುದು ಖದೀಮರಿಗೆ ದರೋಡೆ ನಡೆಸುವ ಇರಾದೆ ಇಲ್ಲವೆಂಬುದು ಸಾಬೀತಾಗಿದೆ. ಐದಾರು ವರ್ಷಗಳಲ್ಲಿ ಕೊಳ್ನಾಡು ಗ್ರಾಮದ ಕುಳಾಲು-ಬೊಳ್ಪಾದೆ, ಅಳಿಕೆ, ಮಂಚಿ, ಪುಣಚ ಹಾಗೂ ವಿಟ್ಲದ ಅರಮನೆ ಗದ್ದೆಯಲ್ಲಿ ಕೂಡಾ ನಿಧಿಗಾಗಿ ಇದೇ ರೀತಿ ನೆಲ ಅಗೆದು ಒಂದಿಷ್ಟು ಜನ ಬಕ್ರಾ ಆಗಿದ್ದಾರೆ. ಮುಸುಕುಧಾರಿಗಳು ನಡೆಸಿದ ದುಷ್ಕøತ್ಯದಲ್ಲಿ ಸ್ಥಳೀಯರ ಜೊತೆ ಕೇರಳ ಕಡೆಯವರು ಶಾಮೀಲಾಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ನಡೆಯುತ್ತಿದೆ.