ಅಕ್ಕಿ ಡಬ್ಬಿಯಲ್ಲಿದ್ದ 10 ಲಕ್ಷ ರೂ ಚಿನ್ನ ದೋಚಿದ ಕಳ್ಳರು

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಮನೆಯವರೆಲ್ಲ ಸಂಬಂಧಿಕರಲ್ಲಿಗೆ ಹೋಗಿದ್ದ ಸಂದರ್ಭ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ರೂ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಉಕ್ಕುಡ ಎಂಬಲ್ಲಿ ನಡೆದಿದೆ. ಮನೆಯೊಳಗಿನ ವಿಚಾರ ಚೆನ್ನಾಗಿ ಅರಿತ ಖದೀಮರೇ ಕಳ್ಳತನ ನಡೆಸಿರುವುದೆಂದು ಸ್ಪಷ್ಟವಾಗಿದೆ.

ವಿಟ್ಲ-ಕಾಸರಗೋಡು ಸಂಪರ್ಕ ರಸ್ತೆಯ ಉಕ್ಕುಡ ಚೆಕ್ ಪೋಸ್ಟ್ ಸಮೀಪದ ಅಡ್ಡರಸ್ತೆಯಲ್ಲಿ 100 ಮೀಟರ್ ದೂರದಲ್ಲಿರುವ ಟಿ ಎಚ್ ಎಮ್ ಎ ಅಬ್ಬಾಸ್ ಹಾಜಿಯ ಮನೆಯಲ್ಲಿ

ಕಳ್ಳತನ ನಡೆದಿದೆ. ಬುಧವಾರ ಸಂಜೆ 5.30ರ ಸುಮಾರಿಗೆ ಹಾಜಿ ಕುಟುಂಬ ಮನೆಗೆ ಬೀಗ ಹಾಕಿ ಕುಂಬ್ರದಲ್ಲಿರುವ ತಮ್ಮ ಸಂಬಂಧಿಕರ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿತ್ತು. ರಾತ್ರಿ 12.30ಕ್ಕೆ ಮರಳಿ ಮನೆಗೆ ಬಂದು ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಬದಿಯ ಸಿಮೆಂಟ್ ಕಿಟಕಿಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರು ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ್ದಾರೆ. ಚಿನ್ನಾಭರಣಗಳು ಎಲ್ಲೂ ಸಿಗದ ಕಾರಣ ಅತಿಬುದ್ಧಿವಂತ ಕಳ್ಳರು ಅಡುಗೆ ಮನೆಯಲ್ಲಿದ್ದ ಅಕ್ಕಿ ಪಾತ್ರೆಯಲ್ಲಿ ಶೋಧ ನಡೆಸಿದಾಗ ಚಿನ್ನಾಭರಣ ದೊರೆತಿದೆ.

ಪೊಲೀಸರ ಎಚ್ಚರಿಕೆ ಕಳ್ಳರಿಗೆ ವರದಾನ ಅಪರಾಧ ತಡೆ ಮಾಸಾಚರಣೆಯ ಸಂದರ್ಭ ಪೊಲೀಸ್ ಇಲಾಖೆ ಕರಪತ್ರ ಮುದ್ರಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು.

ಚಿನ್ನಾಭರಣಗಳನ್ನು ಕಪಾಟುಗಳಲ್ಲಿ ಇಡುವ ಬದಲಾಗಿ ಬ್ಯಾಂಕ್ ಲಾಕರುಗಳಲ್ಲಿ ಇಡಬೇಕು ಅಥವಾ ಅಡುಗೆ ಕೋಣೆಯ ದಿನಸಿ ಡಬ್ಬಗಳಲ್ಲಿ ಸಂಶಯ ಬಾರದಂತೆ ಇಡಬೇಕೆಂಬ ಸಲಹೆ ನೀಡಿತ್ತು. ಅದೇ ಮಾತನ್ನು ನಂಬಿದ್ದ ಹಾಜಿ ಮನೆಯವರು ಚಿನ್ನಾಭರಣಗಳನ್ನು ಅಕ್ಕಿ ಡಬ್ಬದಲ್ಲಿ ಹಾಕಿಟ್ಟಿದ್ದರು. ಆದರೆ ಖದೀಮರು ಎಲ್ಲಾ ಕಡೆಗಳಲ್ಲೂ ಹುಡುಕಾಡಿ ಚಿನ್ನಾಭರಣ ದೊರಕದ ಕಾರಣ ಕೊನೆಗೆ ಅಕ್ಕಿ ಪಾತ್ರೆಯನ್ನೇ ಜಾಲಾಡಿದ್ದಾರೆ. ಅಬ್ಬಾಸ್ ಹಾಜಿ ಮನೆಯಲ್ಲಿದ್ದ 10.5 ಲಕ್ಷ ರೂಪಾಯಿ ಮೌಲ್ಯದ ಸುಮಾರು 44 ಪವನ್ ಚಿನ್ನಾಭರಣ ಕಳ್ಳರ ಪಾಲಾಗಿದೆ.

ಕೆಲದಿನಗಳ ಹಿಂದಷ್ಟೆ ಮಂಗಲಪದವು ಗಾಯತ್ರಿ ಸಹಕಾರಿ ಬ್ಯಾಂಕ್ ದರೋಡೆಗೆ ಕೂಡಾ ಯತ್ನ ನಡೆದಿತ್ತು. ಸ್ಥಳಕ್ಕೆ ಬಂಟ್ವಾಳ ಸಿಪಿಐ ಪ್ರಕಾಶ್ ಆಗಮಿಸಿದ್ದು ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಯಿಸಲಾಗಿದೆ. ಮನೆಯೊಳಗಿನ ವಿಚಾರ ಚೆನ್ನಾಗಿ ಅರಿತವರು ದುಷ್ಕøತ್ಯ ನಡೆಸಿರುವುದಂತೂ ಸ್ಪಷ್ಟವಾಗಿದೆ.

 

LEAVE A REPLY