ಗ್ರಾಹಕರ ಸೋಗಿನಲ್ಲಿ ಚಿನ್ನ ಎಗರಿಸಿದ ಚಾಲಾಕಿ ಕಳ್ಳರು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಸ್ಕಾರ್ಪಿಯೋ ವಾಹನದಲ್ಲಿ ಬಂದ ಚಾಲಾಕಿ ಕಳ್ಳರ ತಂಡ ಕಾರ್ಕಳದ ಬಂಡೀಮಠ ಬಸ್ ನಿಲ್ದಾಣದಲ್ಲಿನ ಫ್ಯಾಕ್ಟರೀಸ್ ಎಂಬ ರೆಡಿಮೇಡ್ ಬಟ್ಟೆ ಅಂಗಡಿಗೆ ಖರೀದಿಯ ನೆಪದಲ್ಲಿ ಅಂಗಡಿ ಮಾಲಿಕನಿಗೆ ಯಾಮಾರಿಸಿ 5 ಸಾವಿರ ರೂ ಮೌಲ್ಯದ ಬಟ್ಟೆ ಕಳ್ಳತನ ಮಾಡಿಕೊಂಡು ಸದ್ದಿಲ್ಲದೇ ಕಾಲ್ಕಿತ್ತ ತಂಡ ಬಳಿಕ ವೆಂಕಟರಮಣ ದೇವಳ ಬಳಿಯ ಆಭರಣ ಜ್ಯುವೆಲ್ಲರ್ಸಿಗೆ ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಸುಮಾರು 1.20 ಲಕ್ಷ ರೂ ಮೌಲ್ಯದ 2 ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.

ಸೋಮವಾರ ಸಂಜೆ 4.15ರ ವೇಳೆಗೆ ಮಹಾರಾಷ್ಟ್ರ ನೋಂದಣಿಯ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ 6 ಜನರಿದ್ದ ತಂಡದಲ್ಲಿ ಮೂವರು ಬಂಡೀಮಠದ ಬಟ್ಟೆ ಅಂಗಡಿಗೆ ಬಂದು ತಮಗೆ ಪ್ಯಾಂಟ್, ಶರ್ಟ್ ತೋರಿಸುವಂತೆ ಮಾಲಕ ರಿಜ್ವಾನ್ ಖಾನ್ ಬಳಿ ಕೇಳಿದಾಗ ಅವರು ವಿವಿಧ ವಿನ್ಯಾಸದ ಬಟ್ಟೆಗಳನ್ನು ತೆಗೆದು ತೋರಿಸುತ್ತಿದ್ದ ವೇಳೆ ತಂಡದಲ್ಲಿದ್ದ ಒಬ್ಬ ಮಹಿಳೆ ಮಾಲಕನ ಕಣ್ಣು ತಪ್ಪಿಸಿ ಬಟ್ಟೆಗಳನ್ನು ಸೀರೆಯೊಳಗೆ ತುರುಕಿ ಅಲ್ಲಿಂದ ಕಾಲ್ಕಿತ್ತಿದ್ದಳು. ಇದಾದ ಬಳಿಕ ಇನ್ನೂ ಮೂವರು ಖರೀದಿಯ ನೆಪದಲ್ಲಿ ಮಾಲಕನ ಗಮನ ಬೇರೆಡೆಗೆ ಹರಿಸಿ ಗ್ರಾಹಕರೊಬ್ಬರಿಗೆ ನೀಡಲು ತಂದಿದ್ದ 2 ಬಂಡಲ್ ಶರ್ಟುಗಳನ್ನು ಪರಾರಿಯಾಗಿದ್ದರು. ಆದರೆ ಚಾಲಾಕಿ ನಕಲಿ ಗ್ರಾಹಕರು ಯಾವುದೇ ಬಟ್ಟೆ ಖರೀದಿಸದೇ ಬಟ್ಟೆಗಳನ್ನು ಕಳವು ಮಾಡಿದ್ದರೂ ಮಾಲಕನಿಗೆ ಈ ವಿಚಾರ ಗೊತ್ತಾಗಿರುವುದು ಅಂಗಡಿಯಲ್ಲಿನ ಸೀಸಿಟೀವಿ ದೃಶ್ಯದಿಂದ. ಆತ ಯಾವುದೋ ಗ್ರಾಹಕಗೆ ಕೊಡಲು ತಂದಿದ್ದ ಬಟ್ಟೆಗಳ ಬಂಡಲ್ ಹುಡುಕಾಡಿದಾಗ ಪತ್ತೆಯಾಗದ ಹಿನ್ನಲೆಯಲ್ಲಿ ಸೀಸಿಟೀವಿ ದೃಶ್ಯ ಕಂಡು ಬೆಚ್ಚಿಬಿದ್ದಿದ್ದ.

ಅಲ್ಲಿಂದ ಕಾಲ್ಕಿತ್ತ ಖತರನಾಕ್ ಕಳ್ಳರ ತಂಡ ಆಭರಣ ಚಿನ್ನದ ಮಳಿಗೆಗೆ ಭೇಟಿ ನೀಡಿ ತಮಗೆ ಚಿನ್ನದ ಸರ ತೋರಿಸುವಂತೆ ಹೇಳಿ ಮಹಿಳಾ ಸಿಬ್ಬಂದಿಯ ಕಣ್ತಪ್ಪಿಸಿ 40 ಗ್ರಾ0ಗೂ ಅಧಿಕ ತೂಕದ 2 ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ವಿಪರ್ಯಾಸವೆಂದರೆ ಆಭರಣ ಮಳಿಗೆಯವರಿಗೆ ತಮ್ಮ ದೈನಂದಿನ ವ್ಯವಹಾರ ಮುಗಿಸುವವರೆಗೂ ಕಳ್ಳತನದ ಕೃತ್ಯ ಅರಿವಿಗೆ ಬಂದಿರಲಿಲ್ಲ. ಬಳಿಕ ಈ ಕುರಿತು ತಕ್ಷಣವೇ ಕಾರ್ಕಳ ನಗರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ನಡೆದ ಎಷ್ಟೋ ಹೊತ್ತಿನ ಬಳಿಕ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಕಳ್ಳರನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಕಾರ್ಕಳದ ಬಳಿಕ ಮೂಡಬಿದಿರೆಯಲ್ಲೂ ಚಿನ್ನಾಭರಣ ಮಳಿಗೆಯಿಂದ ಒಂದಷ್ಟು ಚಿನ್ನ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.