ಪೇದೆಗಳಿಗೆ ಇರಿದು ಪರಾರಿಯಾಗಲೆತ್ನಿಸಿದ ಕಳ್ಳರಿಗೆ ಗುಂಡೇಟು

ಬೆಂಗಳೂರು : ಇಲ್ಲಿನ ಸರ್ಜಾಪುರ ರಸ್ತೆಯಲ್ಲಿ ಇಬ್ಬರು ಕುಖ್ಯಾತ ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ಪೇದೆಗಳಿಗೆ ಚೂರಿಯಿಂದ ಇರಿದರೂ ಕೊನೆಗೆ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಗಳತ್ತ ಗುಂಡು ಹಾರಿಸಿ ಅವರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯಪೇದೆ ಆಂಟನಿ ಹಾಗೂ ಪೇದೆ ವಿಜಯ್ ಅವರ ಹೊಟ್ಟೆ ಭಾಗ ಹಾಗೂ ಭುಜಕ್ಕೆ ಇರಿತದ ಗಾಯಗಳಾಗಿದ್ದು, ಅವರನ್ನು ಸರ್ಜಾಪುರದಲ್ಲಿರುವ ಆಸ್ಪತ್ರೆಗೆ ಸೇರಿಸಲಾಗಿದ್ದರೆ, ಕಾಲಿಗೆ ಗುಂಡೇಟು ತಗಲಿರುವ ಆರೋಪಿಗಳಾದ ಆನೇಕಲ್ ನಿವಾಸಿ ಅಮರ್ (25) ಹಾಗೂ ಚಂದಪುರ ನಿವಾಸಿ ಮುಝಮ್ಮಿಲ್ (20) ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ರಾತ್ರಿ ಆನಂದ್ ಎಂಬ ಸಾಫ್ಟವೇರ್ ಇಂಜಿನಿಯರ್ ಅವರ ಸ್ಮಾರ್ಟ್ ಫೋನ್ ಎಗರಿಸಿ ಇವರಿಬ್ಬರು ಪರಾರಿಯಾಗಿದ್ದು, ಸಂತ್ರಸ್ತ ಆನಂದ್ ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿ ಕಳ್ಳರ ಬೈಕಿನ ಬಗ್ಗೆ ಮಾಹಿತಿ ನೀಡಿದ್ದರು. ಮರುದಿನ ಪೊಲೀಸರು ಆರೋಪಿಗಳನ್ನು ಹಿಡಿಯಲು ನಾಲ್ಕು ತಂಡಗಳನ್ನು ರಚಿಸಿದ್ದು, ಈ ತಂಡಗಳ ಶೋಧ ಕಾರ್ಯಾಚರಣೆಯ ವೇಳೆ ಆರೋಪಿಗಳ ಪತ್ತೆಯಾಗಿತ್ತು.

ಕಳೆದ ವರ್ಷ ಮುಖ್ಯಪೇದೆ ಮುನಿಸ್ವಾಮಿಯನ್ನು ಕೊಂದು ಎಸೈ ನಾಗರಾಜ್ ಅವರನ್ನು ಗಾಯಗೊಳಿಸಿದ್ದ ಘಟನೆಯಲ್ಲೂ ಇವರಿಬ್ಬರು ಆರೋಪಿಗಳಾಗಿದ್ದರು. ಅವರು 11 ಕಳ್ಳತನ ಪ್ರಕರಣಗಳಲ್ಲಿಯೂ ಬೇಕಾಗಿದ್ದವರೆನ್ನಲಾಗಿದೆ.