ಚರ್ಚುಗಳಿಗೆ ನುಗ್ಗಿದ ಕಳ್ಳರು ; ಶಿಲುಬೆ ಸಹಿತ ನಗದು ಕಳವು

ಉಪ್ಪಿನಂಗಡಿ : ಕೊಣಾಲಿನ ಸೈಂಟ್ ಮೇರಿಸ್ ಚರ್ಚ್, ಕೊಣಾಲುವಿನ ಆರ್ಲದ ಸೈಂಟ್ ಥೋಮಸ್ ಚಾಕೋ ಬೈಟ್ ಸಿರಿಯನ್ ಚರ್ಚ್ ಹಾಗೂ ನೆಲ್ಯಾಡಿಯ ಸೈಂಟ್ ಗ್ರಿಗೋರಿಯನ್ ಅರ್ಥೋಡಕ್ಸ್ ಸಿರಿಯನ್ ಚರ್ಚಿಗೆ ಸೋಮವಾರ ಕಳ್ಳರು ನುಗ್ಗಿ ಚಿಲ್ಲರೆ ಹಾಕುವ ಡಬ್ಬಿ ಹಾಗೂ ಚಿನ್ನ ಲೇಪಿತ ಶಿಲುಬೆಯೊಂದನ್ನು ಕಳವುಗೈದಿದ್ದಾರೆ.

ಚರ್ಚುಗಳ ಮುಂಬಾಗಿಲ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹಣಕ್ಕಾಗಿ ಜಾಲಾಡಿದ್ದು, ಕಡತಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಆರ್ಲದ ಸೈಂಟ್ ಥೋಮಸ್ ಚಾಕೋ ಬೈಟ್ ಸಿರಿಯನ್ ಚರ್ಚಿನಲ್ಲಿ ಡಬ್ಬಿಯಲ್ಲಿದ್ದ ಸುಮಾರು ಮೂರು ಸಾವಿರದಷ್ಟು ಚಿಲ್ಲರೆ ಹಣ ಹಾಗೂ ನೆಲ್ಯಾಡಿಯ ಸೈಂಟ್ ಗ್ರಿಗೋರಿಯನ್ ಅರ್ಥೋಡಕ್ಸ್ ಸಿರಿಯನ್ Zರ್ಚಿನಿಂದ ಚಿನ್ನ ಲೇಪಿತ ಸಣ್ಣ ಗಾತ್ರದ ಶಿಲುಬೆ ಮತ್ತು ಅಲ್ಲಿನ ಧರ್ಮಗುರುಗಳ ಕೊಠಡಿಗೆ ನುಗ್ಗಿ ಅದರೊಳಗಿದ್ದ 600 ರೂಪಾಯಿ ನಗದು ಕಳವುಗೈದಿದ್ದಾರೆ.

ಕಳವಾದ ಶಿಲುಬೆಯ ಮೌಲ್ಯ ಸುಮಾರು 5ರಿಂದ 6 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೊಣಾಲಿನ ಸೈಂಟ್ ಮೇರಿಸ್ ಚರ್ಚ್‍ಗೆ ಕಳ್ಳರು ನುಗ್ಗಿದರೂ ದೋಚಲು ಅವರಿಗೆ ಅಲ್ಲೇನೂ ಸಿಕ್ಕಿಲ್ಲ. ಈ ಮೂರು ಚರ್ಚುಗಳು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದು, ಮೂರು ಚರ್ಚ್‍ಗಳು ಸುಮಾರು ಒಂದೊಂದು ಕಿ ಮೀ ಅಂತರದಲ್ಲಿವೆ.

ಹಾಗಾಗಿ ಕಳ್ಳರು ಕಳವು ನಡೆಸಿದ ಬಳಿಕ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ ನೇತೃತ್ವದಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಬಂದು ಪರಿಶೀಲನೆ ನಡೆಸಿದೆ.