ದಟ್ಟ ಮಂಜು : ವಿಮಾನ ವಿಳಂಬ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಕೆಲವು ದಿನಗಳಿಂದ ಇರುವ ದಟ್ಟ ಮಂಜಿನಿಂದಾಗಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದ ಮತ್ತು ಇಲ್ಲಿಂದ ಹೊರಡುವ ವಿಮಾನ ಯಾನದಲ್ಲಿ ಕಳೆದೆರಡು ದಿನಗಳಿಂದ ವಿಳಂಬವಾಗುತ್ತಿದೆ.

ದುಬೈನಿಂದ ಮಂಗಳೂರಿಗೆ ಗುರುವಾರದಂದು ಆಗಮಿಸಬೇಕಾಗಿದ್ದ ಜೆಟ್ ಏರ್ವೇಸ್ ವಿಮಾನ ಬೆಳಿಗ್ಗೆ 8.15ಕ್ಕೆ ಆಗಮಿಸಬೇಕಾಗಿತ್ತು. ಆದರೆ 12.45ಕ್ಕೆ ಬಂದಿದೆ. ಅಂದರೆ ಬರೋಬ್ಬರಿ ನಾಲ್ಕು ಗಂಟೆ ವಿಳಂಬವಾಗಿದೆ. 10.15ರ ಮುಂಜಾನೆ ಲ್ಯಾಂಡ್ ಆಗಬೇಕಾಗಿದ್ದ ಮುಂಬೈನಿಂದ ಬರುವ ಜೆಟ್ ಏರ್ವೇಸ್ ವಿಮಾನ 1.45ಕ್ಕೆ ಲ್ಯಾಂಡ್ ಆಗಿದೆ. ಇನ್ನು ಬೆಂಗಳೂರಿನಿಂದ ಬೆಳಿಗ್ಗೆ 7.30ಕ್ಕೆ ಬರಬೇಕಾಗಿದ್ದ ಜೆಟ್ ಏರ್ವೇಸ್ ವಿಮಾನ 9.30ರ ಬಳಿಕವಷ್ಟೇ ಲ್ಯಾಂಡ್ ಆಗಲು ಸಾಧ್ಯವಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಕಳೆದ ಎರಡು ತಿಂಗಳಿಗೆ ಹೋಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಮಂಜು ಕವಿದಿದೆ.