ಅವರನ್ನು ಒಂದುಮಾಡಲು ಹೋದೆ, ಆದರೆ…

ಪ್ರ : ಆತ ಒಂದು ಕಾಲದ ನನ್ನ ಬೆಸ್ಟ್ ಫ್ರೆಂಡ್. ಅವಳು ಅವನ ಗರ್ಲ್‍ಫ್ರೆಂಡ್ ಆಗಿದ್ದಳು. ಅವರಿಬ್ಬರು ರಾಮ-ಸೀತೆಯಂತೆ ಮುಂದೆ ಹೋಗುತ್ತಿದ್ದರೆ ನಾನು ಲಕ್ಷ್ಮಣನಂತೆ ಅವರ ಹಿಂದೆ. ಎಲ್ಲೇ ಹೋಗುವುದಿದ್ದರೂ ಅವರಿಗೆ ನಾನು ಇರಲೇ ಬೇಕು. ಅವರ ಕ್ಲೋಸಪ್ ಫೋಟೋ ತೆಗೆಯುವುದು ನನ್ನ ಡ್ಯೂಟಿಯಾಗಿತ್ತು. ಅವರಿಬ್ಬರಿಗೆ ನನ್ನೆದುರು ರೊಮ್ಯಾನ್ಸ್ ಮಾಡಲು ಯಾವ ಶಿಗ್ಗೂ ಇರಲಿಲ್ಲ. ಅವರಿಬ್ಬರ ಮಧ್ಯೆ ಕೆಲವೊಮ್ಮೆ ಜಗಳವಾಗುತ್ತಿದ್ದರೂ ನಾನು ಅವರನ್ನು ಒಂದುಮಾಡುತ್ತಿದ್ದೆ. ಅವರು ಖುಶಿಯಿಂದಿರುವುದನ್ನು ನೋಡಿ ನನಗೂ ಸಂತಸವಾಗುತ್ತಿತ್ತು. ಆದರೆ ಅದ್ಯಾವುದೋ ಘಳಿಗೆಯಲ್ಲಿ ಅವರಿಬ್ಬರ ಮಧ್ಯೆ ದೊಡ್ಡ ಜಗಳವಾಗಿ ಮುಖ ಉತ್ತರ-ದಕ್ಷಿಣವಾಯಿತು. ಅವನಿಗಿರುವ ಮುಂಗೋಪ, ಅವಳಿಗಿರುವ ಈಗೋ ಇಬ್ಬರನ್ನೂ ದೂರ ಮಾಡಿತು. ಆದರೆ ಇಬ್ಬರೂ ಒಳಗೊಳಗೇ ನೋವು ಅನುಭವಿಸುವುದನ್ನು ನನ್ನಿಂದ ನೋಡಲಿಕ್ಕಾಗಲಿಲ್ಲ. ಅವರಿಬ್ಬರನ್ನು ಮತ್ತೆ ಒಂದು ಮಾಡುವ ಪೌರೋಹಿತ್ಯದ ಕೆಲಸಕ್ಕೆ ಕೈಹಾಕಿದೆ. ಅವನನ್ನು ಇವಳೆದುರಿಗೆ ಹೊಗಳುವುದು, ಇವಳ ಒಳ್ಳೆಯತನವನ್ನು ಅವನೆದುರಿಗೆ ಬಿಚ್ಚಿಡುವುದು ಮಾಡುತ್ತಿದ್ದೆ . ಆದರೆ ಈ ಬಾರಿ ಅವನು ಇವಳ ಮುಖವನ್ನೂ ನೋಡಲು ಇಷ್ಟಪಡಲಿಲ್ಲ. ಅವನು ಹತ್ತಿರಬರದೇ ಇವಳು ಅವನ ಬಳಿ ಹೋಗಲು ರೆಡಿ ಇರಲಿಲ್ಲ. ಬದಲಾಗಿ ಇವಳು ಪ್ರತಿಯೊಂದಕ್ಕೂ ನನ್ನನ್ನೇ ಅವಲಂಬಿಸಲು ಶುರುಮಾಡಿದಳು. ನನಗೂ ಅವಳ ಸಹವಾಸ ಇಷ್ಟವಾಗತೊಡಗಿತು. ಇಬ್ಬರೂ ಈಗ ಡೇಟಿಂಗ್ ಮಾಡುತ್ತಿದ್ದೇವೆ. ನಾನು ಅವಳ ಜೊತೆ ಸುತ್ತುವುದನ್ನು ನೋಡಿ ಅವನು ನನ್ನ ಜೊತೆ ಮಾತಾಡುವುದನ್ನೇ ಬಿಟ್ಟ. ಮೊದಮೊದಲು ನನಗೆ ಅದು ದೊಡ್ಡ ವಿಷಯವಾಗಿ ಕಾಣುತ್ತಿರಲಿಲ್ಲ. ಆದರೆ ಈಗೀಗ ಅವನು ಒಂಟಿಯಾಗಿರುವುದನ್ನು ನೋಡಿದರೆ ಏನೋ ಕಸಿವಿಸಿಯಾಗುತ್ತದೆ. ನಾನು ಇವಳನ್ನು ಅವನಿಂದ ಶಾಶ್ವತವಾಗಿ ದೂರಮಾಡಿಬಿಟ್ಟೆನಲ್ಲಾ ಅನ್ನುವ ಗಿಲ್ಟ್ ಕಾಡುತ್ತಿದೆ. ಆದರೆ ಈಗ ನಾನು ಆಕೆ ಜೊತೆ ಹಿಂತಿರುಗಿ ಹೋಗಲಾರದಷ್ಟು ಮುಂದೆ ಬಂದಾಗಿದೆ. ಅವಳಂತೂ ಅವನನ್ನು ಕಂಪ್ಲೀಟ್ ಮರೆತು ನನ್ನ ಸಂಗದಲ್ಲಿ ಹಾಯಾಗಿದ್ದಾಳೆ. ನನಗೀಗ ಅವನ ಸ್ನೇಹವೂ ಬೇಕೆನಿಸುತ್ತಿದೆ. ಈಕೆಯನ್ನು ಪ್ರೀತಿಸಿ ನಾನು ತಪ್ಪೆಸಗಿದೆನಾ?

: ಈ ಪ್ರೀತಿಯಲ್ಲಿ ತಪ್ಪು ಯಾವುದು ಸರಿ ಯಾವುದು ಅಂತ ಹೇಳುವುದು ಸ್ವಲ್ಪ ಕಷ್ಟವೇ. ಅದು ಅವರವರ ಮನಸ್ಥಿತಿಯನ್ನು ಅವಲಂಬಿಸಿದೆ. ಅವರಿಬ್ಬರ ನಡುವಿನ ಸಂಬಂಧ ಅಷ್ಟು ಗಾಢವಾಗಿರದೇ ಇರುವ ಕಾರಣಕ್ಕೇ ಅವರಿಬ್ಬರೂ ದೂರವಾಗಿದ್ದಿರಬಹುದು. ಅವರ ಆಕರ್ಷಣೆ ಕ್ಷಣಿಕದ್ದಿರಲೂ ಸಾಕು. ಅಲ್ಲವಾದರೆ ಇಬ್ಬರ ಮಧ್ಯೆ ಯಾವುದಾದರೂ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದ್ದರೂ ಸ್ವಲ್ಪ ಸಮಯದಲ್ಲಿ ಅದು ಬಗೆಹರಿದು ಇಬ್ಬರೂ ಒಂದಾಗುತ್ತಿದ್ದರು. ಅದೂ ಅಲ್ಲದೇ ನೀವು ಮಧ್ಯಸ್ಥಿಕೆ ವಹಿಸಿದರೂ ಅವರು ಒಂದಾಗಲು ಒಪ್ಪಿಲ್ಲ ಅಂದರೆ ಅವರ ಸಂಬಂಧ ಆಗಲೇ ಹಳಸಿತ್ತು ಅಂತಲೇ ಹೇಳಬಹುದು. ಆದರೆ ಆ ಹುಡುಗಿ ಅಷ್ಟು ಬೇಗ ಅವನನ್ನು ಮರೆತು ನಿಮ್ಮ ಸಹವಾಸದಲ್ಲಿ ಖುಶಿಯಿಂದ ಇದ್ದಾಳೆ ಅಂದರೆ ಸ್ವಲ್ಪ ಆಶ್ಚರ್ಯವೇ ಆಗುತ್ತದೆ. ಆಕೆಯನ್ನು ನೀವು ಎಷ್ಟರಮಟ್ಟಿಗೆ ನಂಬಬಹುದು ಅನ್ನುವುದು ನಿಮ್ಮ ತೀರ್ಮಾನಕ್ಕೇ ಬಿಟ್ಟಿದ್ದು. ನೀವೂ ಅಷ್ಟೇ, ನಿಮ್ಮ ಬಾಲ್ಯಸ್ನೇಹಿತನ ಮಾಜೀ ಪ್ರೇಯಸಿ ಜೊತೆ ಓಡಾಡುವಾಗ ನಿಮಗೆ ಸ್ವಲ್ಪವೂ ಮುಜುಗರವಾಗದಿದ್ದುದು ನೋಡಿದರೆ ನಿಮ್ಮ ಒಳಮನಸ್ಸಿನಲ್ಲಿ ನೀವು ಅವಳನ್ನು ಬಯಸುತ್ತಿದ್ದಿರಿ ಅಂತ ಯಾರಿಗಾದರೂ ಅನಿಸುವುದು ಸ್ವಾಭಾವಿಕ. ಒಂದು ವೇಳೆ ನಿಮ್ಮ ಸ್ನೇಹಿತ ಅವಳನ್ನು ಇನ್ನೂ ಪ್ರೀತಿಸುತ್ತಿದ್ದರೆ ಅವನು ನಿಮ್ಮನ್ನು ವಿಲನ್‍ನಂತೆ ನೋಡುವುದು ಸಹಜವೇ. ಆದರೆ ಈಗ ನೀವು ಮುಂದುವರಿದಾಗಿದೆ. ಸ್ನೇಹಿತನಿಗೆ ಬೇಸರವಾಗುತ್ತದೆ ಅಂತ ಈಗ ಆಕೆಯನ್ನು ಅವನಿಗೆ ಒಪ್ಪಿಸಲು ಅವಳೇನು ಆಟದ ಗೊಂಬೆಯಾ? ಅವನನ್ನು ಅವನಷ್ಟಕ್ಕೇ ಬಿಡುವುದೇ ಒಳ್ಳೆಯದು. ಪುನಃ ಅವನ ಸ್ನೇಹಕ್ಕೆ ಪ್ರಯತ್ನಿಸಿ ಮೂರೂ ಜನ ಮುಜುಗರಕ್ಕೊಳಗಾಗುವುದಕ್ಕಿಂತ ಈಗ ಆತನ ಜೊತೆ ಅಂತರ ಕಾಪಾಡಿಕೊಳ್ಳುವುದೇ ಕ್ಷೇಮ.