ಹಣ ನೀಡದ ಎಟಿಎಂ ಅಂತ್ಯಕ್ರಿಯೆ ನಡೆಸಿದರು !

 

ಬೆಂಗಳೂರು : ಜೆಡಿ(ಯು) ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯ ನೋಟು ಅಮಾನ್ಯ ಕ್ರಮವನ್ನು ಬಹಿರಂಗವಾಗಿ ಬೆಂಬಲಿಸಿದ್ದರೆ, ಬೆಂಗಳೂರಿನಲ್ಲಿ ಅವರ ಪಕ್ಷದ ಬೆಂಬಲಿಗರು ಸ್ಥಳೀಯರೊಡನೆ ಸೇರಿಕೊಂಡು ಹಣ ನೀಡದ ಇಲ್ಲಿನ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪವಿರುವ ಎಟಿಎಂ ಮೆಶಿನ್ ಒಂದರ ಅಂತ್ಯಕ್ರಿಯೆ ನಡೆಸಿದರು.

“ಈ ಎಟಿಎಂನಿಂದ ಕಳೆದೊಂದು ತಿಂಗಳಿಂದ ಹಣ ಸಿಗುತ್ತಿಲ್ಲ. ಇನ್ನು ಅದನ್ನು ಇಟ್ಟುಕೊಂಡು ಪ್ರಯೋಜನವಿಲ್ಲ. ಅದಕ್ಕಾಗಿ ಅದರ ಆಂತಿಮ ಸಂಸ್ಕಾರ ನಡೆಸಿದ್ದೇವೆ. ಅದರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಾಮಾಜಿಕ ಕಾರ್ಯಕರ್ತ ಕುಮಾರ್ ಜಹಗೀರದಾರ ಎಂಬವರು ವ್ಯಂಗ್ಯಭರಿತವಾಗಿ ಹೇಳಿದರು.

“ಪ್ರಸಾದವನ್ನು ಪ್ರಧಾನಿ ಮತ್ತು ವಿತ್ತ ಸಚಿವರಿಗೆ ಕಳುಹಿಸಿಕೊಡಲಾಗುವುದು. ಅವರಿಗೂ ನಮ್ಮ ಸಮಸ್ಯೆಯ ಅರಿವಾಗಲಿ. ನಮ್ಮ ಹಣವನ್ನು ನಮಗೆ ಹಿಂದಕ್ಕೆ ಪಡೆಯುವ ಅವಕಾಶವಿಲ್ಲ. ಹೆಚ್ಚಿನ ಎಟಿಎಂಗಳೂ ಕಾರ್ಯನಿರ್ವಹಿಸುತ್ತಿಲ್ಲ” ಎಂದು ಅವರು ಹೇಳಿದರು.

“ಪರಿಸ್ಥಿತಿ ಸುಧಾರಣೆಗೆ ಮೋದಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ನೋಟು ಅಮಾನ್ಯವನ್ನು ಬೆಂಬಲಿಸುತ್ತೇವೆಯಾದರೂ ಜನರ ಸಂಕಷ್ಟಗಳನ್ನು ದೂರ ಮಾಡುವುದು ಅವಶ್ಯ” ಎಂದು ಸ್ಥಳೀಯ ಜೆಡಿ(ಯು) ಘಟಕದ ಅಧ್ಯಕ್ಷ ಸಯ್ಯದ್ ಮೆಹಬೂಬ್ ಹೇಳಿದರು.