ಕೊಟ್ರಪಾಡಿ ಕೋರೆ ಬಳಿ ಉಮೇಶನನ್ನು ನಿರ್ದಯವಾಗಿ ಕೊಲೆ ಮಾಡಿದರು

ಫಾಲೋ-ಅಪ್

ನಮ್ಮ ಪ್ರತಿನಿಧಿ ವರದಿ
ಮುಲ್ಕಿ : ಕಳೆದ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂದಿತರಾದ ನಾಲ್ವರನ್ನು ಆರೋಪಿಗಳನ್ನು ಪೊಲೀಸರು ಕಿನ್ನಿಗೋಳಿ ಪರಿಸರಕ್ಕೆ ಪ್ರತ್ಯೇಕವಾಗಿ ಕರೆತಂದು ಶುಕ್ರವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದಾಗ ಮಹತ್ವದ ಮಾಹಿತಿ ದೊರಕಿದ್ದು ಬೆಚ್ಚಿಬೀಳಿಸಿದೆ. ನಾಲ್ವರ ಹೇಳಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ಒಂದೇ ರೀತಿ ಇದ್ದು ಹಣಕ್ಕಾಗಿ ನಿರ್ದಯವಾಗಿ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಮೂಲ್ಕಿ ಹಾಗೂ ಮೂಡಬಿದ್ರೆ ಪೊಲೀಸರು ಜಂಟಿಯಾಗಿ ಕಿಲೆಂಜೂರು ನಿವಾಸಿ ಉಮೇಶ್ ಶೆಟ್ಟಿ ಕೊಲೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳಾದ ನಿಡ್ಡೋಡಿ ನಿವಾಸಿಗಳಾದ ರಾಜೇಶ್ ಶೆಟ್ಟಿ (32), ತಿಲಕ್ ಪೂಜಾರಿ (26) ಹಾಗೂ ಕಿನ್ನಿಗೋಳಿ ನಡುಗೋಡು ಗ್ರಾಮದ ಕೊಡೆತ್ತೂರು ಬಳಿಯ ಪ್ರಸಾದ ಆಚಾರ್ಯ (27) ಹಾಗೂ ಅವನ ಚಿಕ್ಕಮ್ಮನ ಮಗ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ನಿವಾಸಿ ಪ್ರಕಾಶ್ ಆಚಾರ್ಯ (28) ಎಂಬವರನ್ನು ಬಂದಿಸಿದ್ದರು. ಬಳಿಕ ಆರೋಪಿಗಳನ್ನು ಪ್ರತ್ಯೇಕವಾಗಿ ಕಿನ್ನಿಗೋಳಿ, ಕಿಲೆಂಜೂರು, ಐಕಳ ಸಮೀಪದ ಕುದ್ರಿಪದವು ಕೊಟ್ರಪಾಡಿ ಕೋರೆ ಬಳಿಗೆ ಕರೆದುಕೊಂಡು ಹೋಗಿದ್ದಾರೆ.
ಆರೋಪಿಗಳ ಪ್ರಕಾರ ಸುರತ್ಕಲ್ ಎಂಆರ್ಪಿಎಲ್ಲಿನಿಂದ ಕೆಲಸ ಮುಗಿಸಿ ಸಂಜೆ ಹೊತ್ತು ಬಸ್ಸಿನಲ್ಲಿ ಬಂದಿಳಿದ ಉಮೇಶ್ ಶೆಟ್ಟಿಯನ್ನು ಪಕ್ಷಿಕೆರೆ ಬಳಿ ಆರೋಪಿಗಳಲ್ಲಿ ಒಬ್ಬರಾದ ರಾಜೇಶ್ ಶೆಟ್ಟಿ ಎಂಬವರು ಹೊಸದಾಗಿ ಉದ್ಯಮವನ್ನು ಪ್ರಾರಂಭಿಸುವ ನಿಟ್ಟಿನಿಂದ ಕೋರೆ ತೋರಿಸಲು ಕರೆದುಕೊಂಡು ಹೋಗಿದ್ದಾನೆ. ಉಳಿದ ಮೂರು ಆರೋಪಿಗಳು ಬೈಕಿನಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಐಕಳ ಸಮೀಪದ ಕುದ್ರಿಪದವು ಬಳಿಯ ಕೋಟ್ರಪ್ಪಾಡಿ ಬಳಿಯಲ್ಲಿರುವ ಕೋರೆಯನ್ನು ಉಮೇಶಗೆ ತೋರಿಸಿದ್ದು ಅಲ್ಲಿಯೇ 5 ಜನ ಕುಳಿತುಕೊಂಡು ಮತುಕತೆ ನಡೆದು ಬಳಿಕ ಅಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ನಿರ್ದಯವಾಗಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಕಾರಿನಲ್ಲಿ ಶವವನ್ನು ಕಟೀಲಿನ ಅಜಾರು ಮೂಲಕ ನಿಡ್ಡೋಡಿ ಚರ್ಚ ಬಳಿಯಲ್ಲಿ ಎಸೆದು ಬಂದಿದ್ದಾರೆ. ನಿಡ್ಡೋಡಿ ಚರ್ಚ ಬಳಿಯಲ್ಲಿ ಜನ ಸಂಚಾರ ವಿರಳವಾಗಿದೆ. ಅಲ್ಲಿ ಈ ಹಿಂದೆ ಚಿರತೆ ಸಹಿತ ಕಾಡು ಪ್ರಾಣಿಗಳ ಸಂಚಾರವಿದ್ದುದರಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ನಾಲ್ವರ ಹೇಳಿಕೆಯಿಂದ ತಿಳಿದುಬಂದಿದೆ. ನಾಲ್ವರು ಆರೋಪಿಗಳ ಹೇಳಿಕೆಯೂ ಒಂದೇ ರೀತಿ ಇದ್ದುದರಿಂದ ಆರೋಪಿಗಳೇ ಉಮೇಶ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ ಎಂದು ಮತ್ತಷ್ಟು ರುಜುವಾತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.