ರೂ 10 ಲಕ್ಷ ಮೌಲ್ಯದ ಹೊಸ ನೋಟು ಪಡೆಯಲು ಸ್ನೇಹಿತನ ಕೊಂದೇಬಿಟ್ಟರು

ಬೆಂಗಳೂರು : ಹತ್ತು ಲಕ್ಷ ರೂ ಮೌಲ್ಯದ ಹೊಸ 2000 ರೂಪಾಯಿ ನೋಟುಗಳನ್ನು  ತನ್ನದಾಗಿಸಿಕೊಳ್ಳಲು ನಾಲ್ಕು ಮಂದಿಯ ಗುಂಪೊಂದು ತನ್ನ ಸ್ನೇಹಿತನನ್ನೇ ಬಲಿಪಡೆದ  ಘಟನೆ ರಾಮನಗರದಿಂದ ವರದಿಯಾಗಿದೆ. ಸಣ್ಣ ವ್ಯಾಪಾರಿಯಾಗಿದ್ದ ಹಾಗೂ ರಾಮನಗರದ ಕಾಲಾನಗರ ನಿವಾಸಿಯಾಗಿದ್ದ ಸತ್ತಾರ್ ಅಲಿ (41) ಎಂಬಾತನೇ ತನ್ನ  ಸ್ನೇಹಿತರ ಮೋಸದ ಜಾಲಕ್ಕೆ ಬಲಿ ಬಿದ್ದು ಪ್ರಾಣ ಕಳೆದುಕೊಂಡ ವ್ಯಕ್ತಿ.

ಅಲಿ ಬಳಿ ಹೊಸ 2000 ರೂಪಾಯಿಗಳ ನೋಟು ಇರುವುದರ ಬಗ್ಗೆ ಅರಿತಿದ್ದ ಆತನ ಸ್ನೇಹಿತರಾದ ಅಲ್ತಾಫ್ (48), ಮೊಹೀಬ್ (35), ಸಯ್ಯದ್ ಅಹಮದ್ (32 ಹಾಗೂ ಅಕ್ಬರ್ ಬೇಗ್(45) ಆತನಿಗೆ ಡಿಸೆಂಬರ್ 16ರಂದು ಕರೆ ಮಾಡಿ  ತಮ್ಮಲ್ಲಿರುವ ಹಳೆ ನೋಟುಗಳನ್ನು ಶೇ 30 ಕಮಿಷನ್ ಪಡೆದು ಹೊಸ ನೋಟುಗಳಿಗೆ ಬದಲಾಯಿಸಿಕೊಡುವಂತೆ ಹೇಳಿದ್ದರು. ಸತ್ತಾರನನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದ ಸಮೀಪದ ನಿರ್ಜನ ಸ್ಥಳವೊಮದಕ್ಕೆ ಬರ ಹೇಳಿ ಅಲ್ಲಿ ಆತನನನ್ನು ಸಾಯಿಸಿ, ಹೆಣವನ್ನು ಸುಟ್ಟು ರೂ 10 ಲಕ್ಷದೊಂದಿಗೆ ಪರಾರಿಯಾಗಿದ್ದರು.

ಸತ್ತಾರ ನಾಪತ್ತೆಯಾದಾಗ ಆತನ ಕುಟುಂಬ ಕಂಗಾಲಾಗಿ ಪೊಲೀಸ್ ದೂರು ನೀಡಿತ್ತು. ತರುವಾಯ ಸ್ಥಳೀಯರು ಸುಟ್ಟು ಕರಕಲಾದ ದೇಹವೊಂದನ್ನು ಪರಿಸರದಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.  ಈ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸತ್ತಾರನ ಸಂಬಂಧಿಕರು ಮತ್ತು ಸಮುದಾಯದ ಇತರ ಮಂದಿ  ಚನ್ನಪಟ್ಟಣ ಪೊಲೀಸ್ ಠಾಣೆಯೆದುರು ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಆರೋಪಿಗಳೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.