ರಾಷ್ಟ್ರಗೀತೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಗೆದ್ದವರಿವರು

“ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಲೇ ಬೇಕು ಎಂಬ ನಿಯಮ ಯಾವುದೇ ಕಾನೂನಿನಲ್ಲಿ ಇಲ್ಲ. ಹಾಗೆಯೇ ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಗೌರವದಿಂದ ಎದ್ದುನಿಂತು ಹಾಡಲೇಬೇಕು ಎಂಬ ನಿಯಮವೂ ಇಲ್ಲ” ಎಂದು ಸುಪ್ರೀ ಂಕೋರ್ಟ್ ಹೇಳಿತ್ತು.

ತಮಗೆ ರಾಷ್ಟ್ರಗೀತೆಯನ್ನು ಹಾಡದಿರಲೂ ಹಕ್ಕು ಇದೆ ಎಂದು ಪ್ರತಿಪಾದಿಸಿ ನ್ಯಾಯಾಲಯದ ಮೆಟ್ಟಿಲೇರಿ ಜಯ ಸಾಧಿಸಿದ ಕೇರಳದ ಕೊಟ್ಟಾಯಂನಲ್ಲಿರುವ ಜೆಹೋವಾ ಪಂಥದ ಮೂವರು ವಿದ್ಯಾರ್ಥಿಗಳು  ನ್ಯಾಯಾಲಯದ ತೀರ್ಪಿನ ನಂತರ ಒಂದು ದಿನ ಮಾತ್ರವೇ ಶಾಲೆಗೆ ಹಾಜರಾಗಿದ್ದು ನಂತರ ಈ ಕುಟುಂಬದ ಏಳು ಮಕ್ಕಳ ಪೈಕಿ ಯಾರೂ ಸಹ ಶಾಲೆಗೆ ಹೋಗುತ್ತಿಲ್ಲ. ತಮ್ಮ ಮೂವರು ಮಕ್ಕಳ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ನಿವೃತ್ತ ಪ್ರೊಫೆಸರ್ ವಿ ಜೆ ಎಮಾನ್ಯುಎಲ್, ತಾವು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ತಮ್ಮ ಮಕ್ಕಳ ವ್ಯಾಸಂಗದ ಹಕ್ಕು ಪಡೆಯಲು ಅಲ್ಲ, ಬದಲಾಗಿ ಜೆಹೋವಾ ವಿಟ್ನೆಸ್ ಪಂಥದ ಎಲ್ಲ ಸದಸ್ಯರ ಆರಾಧನಾ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಲುವಾಗಿ ಎಂದು ಹೇಳುತ್ತಾರೆ.

ಹತ್ತನೆಯ ತರಗತಿಯಲ್ಲಿದ್ದ 15 ವರ್ಷದ ಬಿಜೋ ಎಮಾನ್ಯುಎಲ್, 9ನೆಯ ತರಗತಿಯಲ್ಲಿದ್ದ  14 ವರ್ಷದ ಬಿನು ಮತ್ತು 5ನೆಯ ತರಗತಿಯಲ್ಲಿದ್ದ 10 ವರ್ಷದ ಬಿಂದು ಈ ಮೂವರನ್ನು ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಕೊಟ್ಟಾಯಂ ಜಿಲ್ಲೆಯ ಕಿಡಂಗನೂರ್‍ನಲ್ಲಿರುವ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು 1985ರಲ್ಲಿ ಈ ವಿವಾದ ಸೃಷ್ಟಿಸಿದ್ದರು. ಹಿಂದೂ ಸಂಘಟನೆ ನಾಯರ್ ಸೇವಾ ಸಂಸ್ಥೆ ಮಾಲೀಕತ್ವದ ಈ ಶಾಲೆಯಲ್ಲಿ ಜೆಹೋವಾ ಪಂಥದ 11 ವಿದ್ಯಾರ್ಥಿಗಳಿದ್ದರು.

“ಜೆಹೋವಾ ವಿಟ್ನೆಸ್ ಪಂಥದವರ ದೃಷ್ಟಿಯಲ್ಲಿ ಜೆಹೋವಾನನ್ನು ಹೊರತುಪಡಿಸಿ ಮತ್ತಾವುದೇ ದೈವದ ಆರಾಧನೆ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ತಮ್ಮ ಪಂಥದವರು ನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದು ಶಾಲೆಯಲ್ಲೂ ಸಹ ನಮ್ಮ ಮಕ್ಕಳ ಬಗ್ಗೆ ಯಾವುದೇ ಆರೋಪ ಇರಲಿಲ್ಲ. ರಾಷ್ಟ್ರಗೀತೆ ಹಾಡದೆ ಇದ್ದರೂ ಗೌರವದಿಂದ ಎದ್ದುನಿಲ್ಲುತ್ತಿದ್ದರು. ಆದರೆ ಕೆಲವು ಹೊರಗಿನ ಶಕ್ತಿಗಳು ವಿವಾದ ಸೃಷ್ಟಿಸಿವೆ” ಎನ್ನುತ್ತಾರೆ ಎಮಾನ್ಯುಎಲ್.

ಈ ವಿವಾದವನ್ನು ಸುದ್ದಿಪತ್ರಿಕೆಗಳ ಮೂಲಕ ತಿಳಿದುಕೊಂಡ ಕಾಂಗ್ರೆಸ್ ಎಸ್ ಶಾಸಕ ವಿ ಸಿ ಕಬೀರ್ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ಅಂದಿನ ಯುಡಿಎಫ್ ಸರ್ಕಾರದ ಶಿಕ್ಷಣ ಸಚಿವ ಟಿ ಎಂ ಜಾಕಬ್ ಈ ವಿವಾದವನ್ನು ತನಿಖೆ ಮಾಡಲು ಏಕಸದಸ್ಯ ಸಮಿತಿ ನೇಮಿಸಿದ್ದರು. ಸಮಿತಿ ತನ್ನ ತನಿಖೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದೋಷಾರೋಪ ಮಾಡದೆ ಹೋದರೂ ಜಿಲ್ಲಾ ಶಿಕ್ಷಣಾಧಿಕಾರಿಗಳು ಮಕ್ಕಳು ರಾಷ್ಟ್ರಗೀತೆ ಹಾಡುವುದಾಗಿ ಲಿಖಿತ ಪ್ರಮಾಣ ಮಾಡಲು ಆದೇಶಿಸಿದ್ದರು. ಆದರೆ ಮಕ್ಕಳು ಆದೇಶ ಪಾಲಿಸದ ಕಾರಣ ಮೂವರು ಮಕ್ಕಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿತ್ತು.

ಶಾಲೆಯ ನಿರ್ಧಾರದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಇಮಾನ್ಯುಎಲ್ ದಂಪತಿಗಳ ಅಹವಾಲನ್ನು ರಾಜ್ಯ ಹೈಕೋರ್ಟ್ ಮರು ಸಲ್ಲಿಕೆಯ ನಂತರವೂ ತಿರಸ್ಕರಿಸಿತ್ತು. ನಂತರ ಸಮುದಾಯದ ಸದಸ್ಯರ ನೆರವಿನಿಂದ ಎಮಾನ್ಯುಎಲ್ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು.

1986ರಲ್ಲಿ ತನ್ನ ಅಂತಿಮ ತೀರ್ಪಿನಲ್ಲಿ ಎಮಾನ್ಯುಎಲ್ ಪರವಾಗಿ ತೀರ್ಮಾನ ನೀಡಿದ ಸುಪ್ರೀ ಂಕೋರ್ಟ್, “ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಲೇ ಬೇಕು ಎಂಬ ನಿಯಮ ಯಾವುದೇ ಕಾನೂನಿನಲ್ಲಿ ಇಲ್ಲ. ಹಾಗೆಯೇ ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಗೌರವದಿಂದ ಎದ್ದುನಿಂತು ಹಾಡಲೇಬೇಕು ಎಂಬ ನಿಯಮವೂ ಇಲ್ಲ” ಎಂದು ಹೇಳಿತ್ತು.

ಈ ವಿಜಯದ ನಂತರ ಒಂದು ದಿನ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದ ಇಮಾನ್ಯುಎಲ್ ನಂತರ ತನ್ನ ಏಳೂ ಮಕ್ಕಳಿಗೆ ಯಾವುದೇ ರೀತಿಯ ಔಪಚಾರಿಕ ವಿದ್ಯಾಭ್ಯಾಸ ನೀಡಲೇ ಇಲ್ಲ. ಜೆಹೋವಾ ಪಂಥದ ಇತರ ಮಕ್ಕಳೂ ಸಹ ಸದರಿ ಹೈಸ್ಕೂಲ್ ತೊರೆದು ಬೇರೆ ಶಾಲೆಗಳಿಗೆ ಸೇರಿಕೊಂಡಿದ್ದರು. ತಮ್ಮ ಮಕ್ಕಳಿಗೆ ಮನೆಯಲ್ಲೇ ಪಾಠ ಮಾಡುವ ಮೂಲಕ ಇಮಾನ್ಯುಎಲ್ ತಮ್ಮ ಹಠ ಸಾಧಿಸಿದ್ದಾರೆ. ಬಿಜೋ ತನ್ನ  17ನೆಯ ವಯಸ್ಸಿನಲ್ಲೇ ಹತ್ತನೆಯ ತರಗತಿಯನ್ನು ಪೂರೈಸಿರುವುದು ಹೆಮ್ಮೆಯ ವಿಚಾರ ಎನ್ನುತ್ತಾರೆ ಇಮಾನ್ಯುಎಲ್.

ತಮ್ಮ ಮಕ್ಕಳು ಔಪಚಾರಿಕ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಯಾವುದೇ ಭಾವನೆಯನ್ನು ಹೊಂದಿಲ್ಲದ ಇಮಾನ್ಯುಎಲ್ ತಮಗೆ ತಮ್ಮ ಧಾರ್ಮಿಕ ಭಾವನೆಗಳ ಬಗ್ಗೆ ಅಪಾರ ನಿಷ್ಠೆ ಇದ್ದುದರಿಂದ ಮಕ್ಕಳಿಗೆ ಶಾಲಾ ಶಿಕ್ಷಣ ದೊರೆಯದೆ ಇದ್ದರೂ ಕುಟುಂಬ ಸದಸ್ಯರು ಮತ್ತು ಸಮುದಾಯದ ಮಿತ್ರರ ಸಹಾಯದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆತಿದೆ ಎಂದು ಹೇಳುತ್ತಾರೆ.

ಶಿಕ್ಷಣ ಎಂದರೆ ಪದವಿ ಪಡೆಯುವುದೊಂದೇ ಅಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.  ಆದರೂ ತಮ್ಮ ಶಾಲೆಯ ಸಹಪಾಠಿಗಳು ತಮ್ಮನ್ನು ಕಂಡಾಗಲೆಲ್ಲಾ ರಾಷ್ಟ್ರಗೀತೆ ಹಾಡುವ ಮೂಲಕ ಲೇವಡಿ ಮಾಡುವಾಗ ಮನಸ್ಸಿಗೆ ನೋವಾಗುತ್ತದೆ ಎನ್ನುತ್ತಾರೆ ಇಮಾನ್ಯುಎಲ್ ಅವರ ಪುತ್ರಿ ಬಿಂದು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಪ್ರೀಂಕೋರ್ಟ್ ರಾಷ್ಟ್ರಗೀತೆಯನ್ನು ಕುರಿತಂತೆ ನೀಡಿರುವ ತೀರ್ಪನ್ನು ಸ್ವಾಗತಿಸುವ ಇಮಾನ್ಯುಎಲ್ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವಾಗ ಎದ್ದು ನಿಂತು ಗೌರವಿಸಲು ಯಾವುದೇ ಅಭ್ಯಂತರವಿಲ್ಲ, ಸಿನಿಮಾಮಂದಿರಕ್ಕೆ ಹೋದರೆ ಮಾತ್ರ ಈ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳುತ್ತಾರೆ.

ತಮ್ಮ ಎಂಟು ಮೊಮ್ಮಕ್ಕಳು ಶಾಲೆಗೆ ಹೋಗುತ್ತಿದ್ದು ಯಾರೂ ಸಹ ರಾಷ್ಟ್ರಗೀತೆಯನ್ನು ಹಾಡುವುದಿಲ್ಲ, ಶಾಲಾ ಮುಖ್ಯಸ್ಥರೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತಿದ್ದಾರೆ ಎಂದು ಇಮಾನ್ಯುಎಲ್ ಹೇಳುತ್ತಾರೆ.