ಈ ಗ್ರಾಮಸ್ಥರು ತಮ್ಮ ಮಲ ತಾವೇ ಸಾಗಿಸುತ್ತಾರೆ

ಸ್ವಚ್ಛತೆಯ ಕೊರತೆಯಿಂದ ಗ್ರಾಮಗಳಲ್ಲಿ ಅನಾರೋಗ್ಯ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳೂ ಉಲ್ಬಣಿಸುತ್ತಿವೆ ಎನ್ನುತ್ತಾರೆ ದಶರಥ್ ಭಾಯಿ.

ಭಾರತದಾದ್ಯಂತ ಸ್ವಚ್ಛ ಭಾರತ ಅಭಿಯಾನ ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಗುಜರಾತ್ ಸರ್ಕಾರ ರಾಜ್ಯದಲ್ಲಿ ಎಲ್ಲ ಗ್ರಾಮಗಳಲ್ಲೂ ಶೌಚಾಲಯ ನಿರ್ಮಿಸಿರುವುದಾಗಿ ಬೆನ್ನು ತಟ್ಟಿಕೊಳ್ಳುತ್ತಿದೆ. ಆದರೆ ಇದೇ ವೇಳೆ ರಾಜ್ಯದ ವೇಜಾಪುರ ಮತ್ತು ಥಲ್ಟೇಜ್ ಗ್ರಾಮದ 200ಕ್ಕೂ ಹೆಚ್ಚು ಕುಟುಂಬಗಳ ಜನರು ತಮ್ಮ ಮಲವನ್ನು ತಾವೇ ಕೊಂಡೊಯ್ದು ಊರು ಹೊರಗೆ ಬಿಸಾಡಿ ಬರುತ್ತಾರೆ. ಈ ಗ್ರಾಮಗಳಲ್ಲೂ ಸರ್ಕಾರ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ ತ್ಯಾಜ್ಯವನ್ನು ಹೊರಹಾಕಲು ಸರಿಯಾದ ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ.

ಸ್ವಚ್ಛ ಭಾರತ್ ವೆಬ್ ತಾಣದಲ್ಲಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಶೇ 87.41ರಷ್ಟು ಕುಟುಂಬಗಳು ಶೌಚಾಲಯವನ್ನು ಹೊಂದಿವೆ.  ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ವೇಜಾಲ್ಪುರ ಗ್ರಾಮದ 150 ಮತ್ತು ತಲ್ಟೇಜ್ ಗ್ರಾಮದ 75 ಕುಟುಂಬಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ.  ದಲಿತ ಮತ್ತು ವಾಲ್ಮೀಕಿ ಪಂಗಡಕ್ಕೆ ಸೇರಿದ ಈ ಕುಟುಂಬಗಳ ಮಾಸಿಕ ಆದಾಯ 10 ಸಾವಿರ ರೂಪಾಯಿಗೂ ಕಡಿಮೆ ಇದೆ. ಆದರೂ ತಮ್ಮ ಶೌಚಾಲಯದ ನಿರ್ವಹಣೆಗಾಗಿ ಮತ್ತು ಮಲ ನಿರ್ವಹಣೆÉಗಾಗಿ ತಿಂಗಳಿಗೆ 2000 ರೂ ಖರ್ಚು ಮಾಡಬೇಕಾಗುತ್ತದೆ. ತಮ್ಮ ಕೆಲಸ ಸುಲಭವಾಗಲೆಂದು ಮಲವನ್ನು ಊರ ಹೊರಗೆ ಬಿಸಾಡಿ ಬರುವುದು ವಾಡಿಕೆಯಾಗಿದೆ.

ವೇಜಾಲ್ಪುರದ ಕೌನ್ಸಿಲರ್ ಪನ್ನಾ ರಾವ್ ತಮ್ಮ ಗ್ರಾಮದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೆ ತಲ್ಟೇಜ್ ಗ್ರಾಮದ ಕೌನ್ಸಿಲರ್ ತಮ್ಮ ಗ್ರಾಮದಲ್ಲಿ  ಚರಂಡಿ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ. ಆದರೆ 18 ವರ್ಷದ ಚಂಪಾ ವಗೇಲ ಎಂಬ ಬಾಲಕಿ ತನ್ನ ವ್ಯಾಸಂಗವನ್ನೂ ತೊರೆದು ದಿನನಿತ್ಯ ಮಲ ಬಿಸಾಡುವ ಕಾಯಕದಲ್ಲಿ ತೊಡಗಿರುವುದು ವಾಶ್ತವಕ್ಕೆ ಕನ್ನಡಿ ಹಿಡಿದಂತಿದೆ. ತನ್ನ ಮನೆಯ ಮುಂದಿರುವ ಶೌಚ ಗುಂಡಿಯಲ್ಲಿನ ಮಲವನ್ನು ಡಬ್ಬದಲ್ಲಿ ತುಂಬಿಸಿಕೊಂಡು ಊರ ಹೊರಗೆ ಬಿಸಾಡುವುದು ಈ ಬಾಲಕಿಯ ನಿತ್ಯ ಕರ್ತವ್ಯವಾಗಿದೆ. ತಮ್ಮ ಮನೆಯಲ್ಲಿ ಸರ್ಕಾರವೇ ಶೌಚಾಲಯ ನಿರ್ಮಿಸಿದ್ದರೂ ಅರ್ಧದಷ್ಟು ಖರ್ಚು ಮಾತ್ರ ಭರಿಸಿದ್ದು ತ್ಯಾಜ್ಯ ಹೊರ ಹೋಗಲು ಚರಂಡಿ ವ್ಯವಸ್ಥೆಯನ್ನೇ ಮಾಡಿಲ್ಲ ಎಂದು ಕಿರಿತ್‍ಭಾಯ್ ಕಬೀರಾ ಹೇಳುತ್ತಾರೆ. ಈ ಗ್ರಾಮಗಳಲ್ಲಿ ಬೀದಿ ದೀಪಗಳಿಲ್ಲದಿರುವುದು ಮತ್ತು ಉತ್ತಮ ರಸ್ತೆ ಸಂಪರ್ಕ ಇಲ್ಲದಿರುವುದೂ ಪ್ರಮುಖ ಸಮಸ್ಯೆಯಾಗಿದೆ. ಸ್ವಚ್ಛತೆಯ ಕೊರತೆಯಿಂದ ಗ್ರಾಮಗಳಲ್ಲಿ ಅನಾರೋಗ್ಯ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳೂ ಉಲ್ಬಣಿಸುತ್ತಿವೆ ಎನ್ನುತ್ತಾರೆ ದಶರಥ್ ಭಾಯಿ. ತಮ್ಮ ಮನೆಗಳಲ್ಲಿನ ಶೌಚಾಲಯದ ಹೊಂಡ ಬೇಗನೆ ತುಂಬುವುದರಿಂದ ಮನೆಯ ಎಲ್ಲ ಸದಸ್ಯರೂ ಶೌಚಾಲಯ ಬಳಸುವುದಿಲ್ಲ. ಒಮ್ಮೆ ತುಂಬಿದ ಹೊಂಡವನ್ನು ಶುಚಿಗೊಳಿಸಲು ಎರಡು ಸಾವಿರ ರೂ ಖರ್ಚಾಗುತ್ತದೆ. ಬೆಳಗಿನ ವೇಳೆ ಸುಲಭ್ ಶೌಚಾಲಯ ಬಳಸುವ ಜನರು ಸಂಜೆ ಕತ್ತಲಾದ ಮೇಲೆ ಬಯಲನ್ನೇ ಅವಲಂಬಿಸುತ್ತಾರೆ.

ಕೊಳೆಗೇರಿ ನಿವಾಸಿಗಳಿಗೆ ಶೌಚಾಲಯ ಸೌಲಭ್ಯ ಒದಗಿಸಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ, ಪುರಸಭೆಗೆ ತೆರಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳುವ ಬಿಜೆಪಿ ನಾಯಕ ಮತ್ತು ತಲ್ಟೇಜ್ ಕೌನ್ಸಿಲರ್ ಲಾಲ್ ಸಿಂಹ್ ಠಾಕೂರ್ ಕೊಳೆಗೇರಿ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದರೆ ಶೌಚಾಲಯ ಸೌಲಭ್ಯ ಒದಗಿಸಲಾಗುವುದಿಲ್ಲ ಎಂದು ಖಚಿತವಾಗಿ ಹೇಳುತ್ತಾರೆ.

ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗುತ್ತಿರುವುದರಿಂದ ಮುಂದೊಂದು ದಿನ ಈ ಗ್ರಾಮದ ಅನೇಕ ಮನೆಗಳು ನೆಲಸಮವಾಗಲಿವೆ. ಹಾಗಾಗಿಯೇ ಚರಂಡಿ ನಿರ್ಮಾಣ ಮಾಡಲಾಗಿಲ್ಲ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಗಂಭೀರ ಸಮಸ್ಯೆಗಳು ಕೇವಲ ಐದಾರು ಗ್ರಾಮಗಳಲ್ಲಿ ಮಾತ್ರವೇ ಇದೆ ಎಂದು ಪುರಸಭಾ ಆಯುಕ್ತರು ಹೇಳುತ್ತಾರೆ.