`ಜನನುಡಿ’ ಸಮಾವೇಶದಲ್ಲಿ ಪ್ರತಿಪಾದನೆ

ಮದುವೆ ಇರಬಾರದು : ಮೀನಾಕ್ಷಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾಷೆಗೆ ಮೈಲಿಗೆ ಇಲ್ಲ. ನುಡಿಗೆ ಮೈಲಿಗೆ ಇಲ್ಲ. ತತ್ವಪ್ರತಿಪಾದರೂ ಮೈಲಿಗೆ ಇಲ್ಲದ ಹಲವು ದರ್ಶನಗಳನ್ನ ಪ್ರತಿಪಾದಿಸಿದರು ಎಂದು ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಹೇಳಿದರು.

ಮಂಗಳೂರು ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಶನಿವಾರ ಆರಂಭವಾದ ಜನನುಡಿ-2016 ಸಾಹಿತ್ಯ ಸಮಾವೇಶದಲ್ಲಿ ಅವರು ನಿರ್ವಚನೆಯೊಂದಿಗೆ ಬಸಮ್ಮ ಸ್ಥಾವರ ಮಠ ಅಕ್ಕಲಕೋಟಿ ತಂಡದೊಂದಿಗೆ ತತ್ತ್ವಪದಗಳ ಗಾಯನ ನಡೆಸಿಕೊಟ್ಟ ಸಂದರ್ಭದಲ್ಲಿ ಅವರು ತತ್ವಪದಗಳ ವಿಶ್ಲೇಷಣೆಯನ್ನೂ ಮಾಡಿದರು.

ತತ್ತ್ವಪದಗಳು ಪುರೋಹಿತಶಾಹಿಯ ವಿರುದ್ಧ ಪ್ರಬಲವಾದ ಅಸ್ತ್ರ ಎಂದು ವಿಶ್ಲೇಷಿಸಿದ ಮೀನಾಕ್ಷಿ ಬಾಳಿ, “ನಾವು ವೈಚಾರಿಕತೆಯ ಯೋಧರಾಗಬೇಕಿದೆ” ಎಂದು ಕರೆ ನೀಡಿದರು.

ಸಂಪ್ರದಾಯವಾದಿಗಳು ಮಹಿಳೆಯರು ಮತ್ತು ತಳಸಮುದಾಯಗಳ ಮೇಲೆ ನಡೆಸುವ ದೌರ್ಜನ್ಯವನ್ನು, ಸೂಕ್ಷ್ಮ ಹಿಂಸೆಗಳನ್ನು ತತ್ತ್ವಪದಕಾರರು ಕಟ್ಟಿಕೊಟ್ಟ ಬಗೆಯನ್ನು ನಿರೂಪಿಸುತ್ತಾ ಈ ತತ್ತ್ವಪದಗಳ ಚಿಂತನೆಗಳು ಹೇಗೆ ಇಂದಿಗೂ ಸಲ್ಲುತ್ತವೆ ಎಂದು ವಿವರಿಸಿದರು.

ಹೆಣ್ಣಿನ ಮೇಲೆ ನಡೆಸಲಾಗುವ ಸಾಮಾನಜಿಕ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ, “ಹೆಣ್ಣನ್ನು ನೀನು ಮಾತೆ, ನೀನು ಗೃಹಿಣಿ ಎಂದೆಲ್ಲ ಸೀಮಿತಗೊಳಿಸಿ ದಬ್ಬಾಳಿಕೆ ಮಾಡಲೆಂದೇ ಮದುವೆಯನ್ನು ಅವರ ಮೇಲೆ ಹೇರಲಾಗಿದೆ. ಅಭಿವೃದ್ಧಿ ಸಾಧ್ಯವಾಗಬೇಕು ಅಂದರೆ ಈ ಮದುವೆ ಅನ್ನುವುದು ಹೋಗಬೇಕು” ಎಂದು ಅಭಿಪ್ರಾಯಪಟ್ಟರು.

ಬಸಮ್ಮ ಸ್ಥಾವರಮಠ ತಂಡದ ಗಾಯಕರು ಹಲವು ಅಪರೂಪದ, ಚಿಂತನಾರ್ಹ ತತ್ತ್ವಪದಗಳನ್ನು ಪ್ರಸ್ತುತಪಡಿಸಿದರು.