ದಾಂಪತ್ಯದಲ್ಲಿ ಸ್ವಾರಸ್ಯವೇ ಇಲ್ಲ

man and woman sleeping in bed together

ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಹೀಗೆ ಜೀವನದಲ್ಲಿ

ನಾವಿನ್ಯತೆ ತರಲು ವಿನಿಯೋಗಿಸದಿದ್ದರೆ ಅದರಿಂದೇನು ಪ್ರಯೋಜನ ?

 

ಪ್ರ : ಮದುವೆಯಾಗಿ ಹದಿನೈದು ವರ್ಷಗಳಾದವು. ಇಬ್ಬರು ಹೈಸ್ಕೂಲಿಗೆ ಹೋಗುವ ಮಕ್ಕಳಿದ್ದಾರೆ. ಹೆಂಡತಿಯೂ ಕೆಲಸದಲ್ಲಿ ಇದ್ದಾಳೆ. ಸ್ವಲ್ಪ ಸಾಲ ಮಾಡಿ ಸಣ್ಣಮನೆ ಕಟ್ಟಿದ್ದೇವೆ. ನನ್ನ ಸಮಸ್ಯೆಯೆಂದರೆ ನಮ್ಮ ಜೀವನವೇ ಯಾಂತ್ರಿಕವಾಗಿ ಬಿಟ್ಟಿದೆ. ಹೆಂಡತಿ ಯಾವಾಗಲೂ ಬ್ಯೂಸಿ. ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆ ಮತ್ತು ಆಫೀಸ್ ಕೆಲಸದಲ್ಲಿಯೇ ತೊಡಗಿರುತ್ತಾಳೆ. ಅವಳಿಗೆ ಆರಾಮವಾಗಿ ಟೀವಿ ನೋಡುತ್ತಾ ಅಥವಾ ನನ್ನ ಮತ್ತು ಮಕ್ಕಳ ಜೊತೆ  ಹರಟುತ್ತಾ ಕುಳಿತೇ ಗೊತ್ತಿಲ್ಲ.  ರಜಾ ದಿನದಂದೂ ಏನಾದರೂ ತಿಂಡಿ ಮಾಡ್ತಾನೋ ಇಲ್ಲಾ ಕಸೂತಿ ಕೆಲಸದಲ್ಲೋ ತಲ್ಲೀನಳಾಗಿ ಇರುತ್ತಾಳೆ. ಅವಳಿಗೆ ಮನೆ ತುಂಬಾ ಅಚ್ಚುಕಟ್ಟಾಗಿರಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೂ ನನ್ನ ಮತ್ತು ಮಕ್ಕಳ ಮೇಲೆ ರೇಗುತ್ತಾಳೆ. ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸವಾಗದಿದ್ದರೆ ಅವಳಿಗೆ ಸಮಾಧಾನವೇ ಇಲ್ಲ. ಆದರೆ ನನಗೆ ಎಲ್ಲರಂತೆ ಹೊರಗೆ ಸಿನಿಮಾ ನೋಡಬೇಕು, ಮಕ್ಕಳ ಜೊತೆ ಹೊಟೇಲಿಗೆ ಹೋಗಿ ಹೊಸರುಚಿ ಟ್ರೈ ಮಾಡಬೇಕು, ಆಗಾಗ ಪಿಕ್ನಿಕ್ಕಿಗೆ ಹೋಗುತ್ತಿರಬೇಕು ಅನ್ನುವುದೆಲ್ಲ ಬಯಕೆ. ನಮ್ಮವಳು ಅದಕ್ಕೆಲ್ಲ ದುಡ್ಡು ವೇಸ್ಟ್ ಮಾಡಲೇ ಬಿಡುವುದಿಲ್ಲ. ಉಳಿದೆಲ್ಲದರಲ್ಲಿ ಕಂಜೂಸಿ ಮಾಡಿ ದುಡ್ಡು ಉಳಿಸಿಕೊಂಡು ಚಿನ್ನ ತೆಗೆದುಕೊಳ್ಳುವುದು ಅವಳಿಗೆ ಬಲು ಪ್ರೀತಿ. ಅವಳಿಗೆ ಸೆಕ್ಸ್‍ನಲ್ಲಿ ಸಹ ಆಸಕ್ತಿ ಕಡಿಮೆ. ನನಗೆ ಬೇಕಾಗಿ ಸುಮ್ಮನೆ ಸಹಿಸಿಕೊಂಡಿರುವಂತೆ ಕಾಣುತ್ತದೆ. ಅವಳು ಒಳ್ಳೆಯವಳೇ. ನನ್ನ ಮತ್ತು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಎಲ್ಲವನ್ನೂ ಹೊಂದಿಸಿಕೊಡುತ್ತಾಳೆ. ಆದರೆ ಜೀವನದಲ್ಲಿ ಸ್ವಲ್ಪವೂ ಥ್ರಿಲ್ ಇಲ್ಲವಾಗಿದೆ. ನನಗೆ ಸ್ನೇಹಿತರೂ ಕಡಿಮೆ. ಈ ಬೋರ್ ಲೈಫಿನಿಂದ ಹೇಗೆ ಹೊರಬರಲಿ?

: ನಿಮಗೆ ಒಳ್ಳೆಯ ಹೆಂಡತಿ, ಮಕ್ಕಳು ಮತ್ತು ಸ್ವಂತ ಮನೆ ಎಲ್ಲವೂ ಇದ್ದರೂ ನೆಮ್ಮದಿ ಇಲ್ಲ ಅಂದರೆ ಕ್ಯಾಪ್ಟನ್ ಸೀಟಿನಲ್ಲಿರುವ ನಿಮ್ಮದೇ ತಪ್ಪು. ಶಿಸ್ತಿನ ಹೆಂಡತಿ ಸಿಕ್ಕಿದ್ದು ನಿಮ್ಮ ಪುಣ್ಯ. ಹೆಚ್ಚಿನ ಹೆಂಗಸರು ದುಡಿದಿದ್ದೆಲ್ಲ ಬೇಡದಕ್ಕೆ ಸುರಿದು ಗಂಡನನ್ನು ಬರಿಗೈ ದಾಸ ಮಾಡುವವರೇ ಇರುವಾಗ ನಿಮ್ಮ ಹೆಂಡತಿಯ ಆರ್ಥಿಕ ಶಿಸ್ತಿನಿಂದ ನೀವೀಗ ಸ್ವಂತ ಮನೆಯಲ್ಲಿ ಇರುವಂತಾಗಿದೆ. ಮನೆಯಲ್ಲಿಯೇ ತಿಂಡಿ ಸರಬರಾಜು ಮಾಡುವ ಹೆಂಗಸರು ಅದರಲ್ಲೂ ದುಡಿಯುವ ಮಹಿಳೆ ಈಗಿನ ಕಾಲದಲ್ಲಿ ಸಿಗುವವರು ಕಡಿಮೆಯೇ. ನಿಮ್ಮ ಹೆಂಡತಿಯಲ್ಲಿ 95 ಶೇಕಡಾಕ್ಕಿಂತ ಹೆಚ್ಚು ಒಳ್ಳೆಯ ಗುಣವೇ ಇದೆ. ನೀವು ನಿಜಕ್ಕೂ ಲಕ್ಕಿ. ಹಾಗೆಯೇ ನಿಮ್ಮ ದಾಂಪತ್ಯವನ್ನು ಸ್ವಲ್ಪ ರಸಮಯ ಮಾಡಿಕೊಳ್ಳಬೇಕು ಅನ್ನುವ ನಿಮ್ಮ ಆಸೆಯೂ ಸಹಜವೇ. ಹೆಂಡತಿಯ ಹತ್ತಿರ ನಿಮ್ಮ ಭಾವನೆಯನ್ನು ಮುಕ್ತವಾಗಿ ತಿಳಿಸಿ. ವಾರಕ್ಕೊಮ್ಮೆಯಾದರೂ ಅರ್ಧ ದಿನ ಸಂಸಾರದ ಜಂಜಾಟವೆಲ್ಲ ಬಿಟ್ಟು ಹೊರಗೆ ಹೋಗಿ ತಿರುಗುವ ಮತ್ತು ತಿನ್ನುವ ಅಭ್ಯಾಸದಿಂದ ನಿಮ್ಮ ಮತ್ತು ಮಕ್ಕಳ ನಡುವಿನ ಸಂಬಂಧ ಇನ್ನೂ ಗಟ್ಟಿಗೊಳ್ಳುವುದಾಗಿ ತಿಳಿಸಿ. ಪ್ರತೀದಿನ ಅರ್ಧ ಗಂಟೆಯಾದರೂ ಮನೆಯವರೆಲ್ಲ ಸೇರಿಕೊಂಡು ಹರಟುತ್ತಾ (ಮಕ್ಕಳ ಪರೀಕ್ಷೆ ಸಮಯ ಬಿಟ್ಟು) ಟಿವಿ ಪ್ರಾಗ್ರಾಂ ನೋಡುವುದೂ ಒಳ್ಳೆಯದೇ. ಅಪರೂಪಕ್ಕೊಮ್ಮೆ ಹೊರಗೆ ಮೆಲ್ಲುವ ಪಾನಿಪುರಿಯಲ್ಲೋ ಇಲ್ಲಾ ಐಸ್‍ಕ್ರೀಂನಲ್ಲೋ ಇರುವ ಮಜಾವನ್ನು ಅನುಭವಿಸಿಯೇ ತೀರಬೇಕು ಅಂತ ಹೆಂಡತಿಯ ತಲೆಗೆ ತುಂಬಿ. ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಹೀಗೆ ಜೀವನದಲ್ಲಿ ನಾವಿನ್ಯತೆ ತರಲು ವಿನಿಯೋಗಿಸದಿದ್ದರೆ ಅದರಿಂದೇನು ಪ್ರಯೋಜನ? ವರ್ಷಕ್ಕೊಮ್ಮೆಯಾದರೂ ಚಿಕ್ಕಪುಟ್ಟ ಪ್ರವಾಸಕ್ಕೆ ಹೋಗಿ ಮಕ್ಕಳ ಜೊತೆ ಎಂಜಾಯ್ ಮಾಡುವ ಅಭ್ಯಾಸ ಇಟ್ಟುಕೊಂಡರೆ ಯಾಂತ್ರಿಕ ಬದುಕಿನಲ್ಲೂ ಹುರುಪು ಮೂಡುತ್ತದೆ. ಜೀವನದಲ್ಲಿ ಶಿಸ್ತಿರಬೇಕು ನಿಜ, ಆದರೆ ಅತೀ ಶಿಸ್ತು ನಮ್ಮನ್ನು ನಾವೇ ಬಂಧನಕ್ಕೊಳಪಡಿಸಿಕೊಂಡಂತೆ ಎನ್ನುವುದು ನೆನಪಿರಬೇಕು.