ಬೈಂದೂರಿನಲ್ಲಿ ಇಂದಿನಿಂದ ನಾಟಕ ಉತ್ಸವ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಸುರಭಿ ಸಂಘಟನೆಯು ಕನ್ನಡ ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ `ರಂಗ ಸುರಭಿ’ ಎಂಬ ರಾಜ್ಯ ಮಟ್ಟದ ನಾಟಕ ಉತ್ಸವವನ್ನು ಉಡುಪಿ ಜಿಲ್ಲೆಯ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಇಂದಿನಿಂದ ಡಿ 18ರವರೆಗೆ ಹಮ್ಮಿಕೊಂಡಿದೆ.

ಉತ್ಸವದುದ್ದಕ್ಕೂ ಪ್ರತಿ ದಿನ ಸಂಜೆ ಒಂದು ನಾಟಕ ಪ್ರದರ್ಶನಗೊಳ್ಳಲಿದೆ. ಉತ್ಸವವನ್ನು ಸೋಮವಾರ ಸಂಜೆ 6 ಗಂಟೆಗೆ ಬರಹಗಾರ್ತಿ ವೈದೇಹಿ ಉದ್ಘಾಟಿಸಲಿದ್ದಾರೆ.

ವೇದಿಕೆಯಲ್ಲಿ ಇಂದು ಬೆಂಗಳೂರಿನ ಪ್ರಸಂಗ ತಂಡದ `ಅಭಿಜ್ಞಾತ ಶಾಕುಂತಳಾ’, 13ರಂದು ಬೆಂಗಳೂರಿನ ರಂಗಮಂಟಪದಿಂದ `ಮಲ್ಲಿಗೆ’,  14ರಂದು ಬೆಂಗಳೂರಿನ ರಂಗಪಯಣ ತಂಡದಿಂದ `ಚಂದ್ರಗಿರಿ ತೀರದಲ್ಲಿ’, 15ರಂದು ಉಡುಪಿ ರಂಗಭೂಮಿಯಿಂದ `ರೂಪಗಳನು ದಾಟಿ’, 16ರಂದು ಅನನ್ಯ ಬೆಂಗಳೂರು ತಂಡದಿಂದ `ಅತೀತ’, 17ರಂದು ಬೆಂಗಳೂರಿನ ಪ್ರಕಾಸಮ್ ತಂಡದಿಂದ `ಮಹಾಪೀಡೆ’  ಮತ್ತು 18ರಂದು ಕೊಡವೂರು ನೃತ್ಯನಿಕೇತನ ತಂಡದಿಂದ `ಚಿತ್ರ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಉಡುಪಿ ವಾಸುದೇವ ರಾವ್ ಪಿ, ಬೆಂಗಳೂರಿನ ಪ್ರಕಾಶ್ ಶೆಟ್ಟಿ, ಹೊನ್ನಾವರದ ಕಿರಣ್ ಭಟ್, ಹೊಸಕೋಟೆಯ ರಾಜಗುರು, ಎಸ್ ಎನ್ ಸೀತಾರಾಮ, ರಾಜೇಂದ್ರ ಕಾರಂತ್ ಮತ್ತು ಮುರಳೀಧರ್ ಉಪಾಧ್ಯಾಯ ಹಿರಿಯಡಕ ಈ ಸಂದರ್ಭ ಗೌರವಿಸಲ್ಪಡಲಿದ್ದಾರೆ.

ಸುಮಾರು 16 ವರ್ಷಗಳ ಹಿಂದೆ ಪ್ರಾರಂಭಿಸಲಾದ ಸುರಭಿ ಸಂಘಟನೆಯು ಇಂದು ಕ್ಲಾಸಿಕಲ್ ಡ್ಯಾನ್ಸ್, ಕರ್ನಾಟಿಕ್ ಮತ್ತು ಹಿಂದುಸ್ತಾನಿ ಮ್ಯೂಸಿಕ್, ನಾಟಕ ಕಲೆ ಮತ್ತು ವಾರಾಂತ್ಯದಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ತರಬೇತಿ ಮೊದಲಾದ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುತ್ತಾ ಬಂದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುರಭಿ ಸಂಟನೆಯ ನಿರ್ದೇಶಕ ಸುಧಾಕರ್ ಪಿ ಹೇಳಿದ್ದಾರೆ.