ಪತಿ, ಅತ್ತೆ ಸೇರಿ ಮಹಿಳೆ ಕೊಲೆಗೆ ಯತ್ನ : ಆರೋಪ

ಸಾಂದರ್ಭಿಕ ಚಿತ್ರ

ದಾಂಡೇಲಿ : ನಗರದ ಬಾಂಬೇಚಾಳ ಟೌನ್ ಶಿಪ್ಪಿನಲ್ಲಿ ರವಿವಾರ ಪತಿ ಮತ್ತು ಅತ್ತೆ ಸೇರಿ ಮಹಿಳೆಯ ಮೇಲೆಯೇ ಸೀಮೆಣ್ಣೆ ಸುರಿದು ಕೊಲೆ ಮಾಡಲು ಯತ್ನಿದರೆಂದು ಆರೋಪಿಸಲಾಗಿದೆ.

ನಗರದ ಬಾಂಬೇಚಾಳದ ರಾಘವೇಂದ್ರ ಬಂಕಾಪುರ ಹಾಗೂ ಅಜಾದನಗರದ ರೇಖಾ (ಮಧು) ಅವರು 2013 ಮೇ 3ರಂದು ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಇಲ್ಲಿಯವರೆಗೂ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಅತ್ತೆ ಶಾರದಾ ಬಂಕಾಪುರ ಹಾಗೂ ಗಂಡ ರಾಘವೇಂದ್ರ ಬಂಕಾಪುರ ನಿತ್ಯ ಪೀಡಿಸುತ್ತಿದ್ದರು, ಹೊಡೆಯುತ್ತಿದ್ದರು, ಹಣಕ್ಕಾಗಿ ಕಾಡಿಸುತ್ತಿದ್ದರು ಎಂದು ಆಕೆ ದೂರಿದ್ದಾಳೆ. ರೇಖಾ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ದುಡಿದ ಹಣವನ್ನು ಹೆಚ್ಚಾಗಿ ಗಂಡನೇ ಪಡೆದುಕೊಳ್ಳುತ್ತಿದ್ದ, ಹಣ ತರುವಂತೆ ಕಾಡಿಸುತ್ತಿದ್ದ ಎಂದು ಆಕೆ ದೂರಿದ್ದಾಳೆ. ಈ ಬಗ್ಗೆ ಹಲವು ಬಾರಿ ರಾಜಿ ಸಂಧಾನಗಳು, ಹಿರಿಯರ ಬುದ್ಧಿಮಾತುಗಳು ಹೇಳಲ್ಪಟ್ಟಿವೆಯಾದರೂ ತಾಯಿ-ಮಗ ಸರಿದಾರಿಗೆ ಬಂದಿರಲಿಲ್ಲ. ಇವರ ಈ ಕುಟುಂಬ ಜಗಳ ಪೊಲೀಸ್ ಠಾಣೆಯವರೆಗೂ ತಲುಪಿತ್ತು. ಇತ್ತೀಚಿನ ದಿನಗಳಲ್ಲಿ ಗಂಡ ರಾಘವೆಂದ್ರ ಹೆಂಡತಿ ರೇಖಾಳಿಗೆ ಮನೆ ಬಿಟ್ಟು ಹೋಗುವಂತೆ ಪೀಡಿಸುತ್ತಿದ್ದನಂತೆ. ಮೊನ್ನೆ ಈ ಆರೋಪಿಗಳೆಲ್ಲ ಸೇರಿ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

“ಅತ್ತೆ ಶಾರದಾ ಬಂಕಾಪುರ ಹಾಗೂ ಪತಿ ರಾಘವೇಂದ್ರ ಬಂಕಾಪುರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳ ಬಂಧನವಾಗಿಲ್ಲ. ಬಂಧನಕ್ಕಾಗಿ ಕಾರ್ಯಚರಣೆ ಮುಂದುವರೆದಿದೆ” ಎಂದು ಪಿಎಸೈ ಪರವಾರ ತಿಳಿಸಿದ್ದಾರೆ.