ಹೆಂಡತಿಗೆ ನನ್ನ ಬಗ್ಗೆ ಆಸಕ್ತಿ ಇಲ್ಲ

ಪ್ರ : ನನಗೀಗ 29 ವರ್ಷ ವಯಸ್ಸು. ಮದುವೆಯಾಗಿ ಎರಡು ವರ್ಷಗಳಾದವು. ಮದುವೆಯಾದ ಹೊಸತರಲ್ಲಿ ನಮ್ಮಿಬ್ಬರ ನಡುವೆ ಎಲ್ಲವೂ ಸರಿ ಇತ್ತು. ಆದರೆ ಈಗ ಕೆಲವು ತಿಂಗಳಿಂದ ನಮ್ಮ ಸಂಬಂಧ ತುಂಬಾ ನೀರಸವಾಗಿದೆ. ನನ್ನ ಹೆಂಡತಿ  ವಾರದಲ್ಲಿ ಆರು ದಿನ ಕೆಲಸಕ್ಕೆ ಹೋಗುತ್ತಾಳೆ. ಆಫೀಸಿನಿಂದ ಬಂದವಳು ಮನೆಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಅವಳು ನನ್ನ ಜೊತೆ ಮಾತಾಡುವುದೂ ಕಡಿಮೆ. ನನಗೂ ದಿನವಿಡೀ ಫೀಲ್ಡ್‍ವರ್ಕ್ ಇರುವುದರಿಂದ ರಾತ್ರಿ ಅವಳು ಮಲಗಲು ಬರುವ ವೇಳೆಗೆ ನಾನು ನಿದ್ದೆ ಹೋಗಿರುತ್ತೇನೆ. ಒಮ್ಮೊಮ್ಮೆ ನಾನೇ ಉಮೇದಿ ತೋರಿಸಿದರೆ ಅವಳದು ತಣ್ಣಗಿನ ಪ್ರತಿಕ್ರಿಯೆ. ಹೀಗಾಗಿ ನಾವಿಬ್ಬರೂ ಕೂಡುವುದೂ ಅಪರೂಪಕ್ಕೊಮ್ಮೆ. ಇನ್ನೂ ಮಗುವಿನ ಬಗ್ಗೆ ಯೋಚಿಸಿಲ್ಲ. ನನ್ನ ಹೆಂಡತಿಯಂತೂ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡುಬಿಟ್ಟಿದ್ದಾಳೆ. ನನ್ನ ಮೇಲೂ ಪ್ರೀತಿ ತೋರಿಸುತ್ತಿಲ್ಲ. ಈಗಲೇ ವಯಸ್ಸಾದವರಂತೆ ವರ್ತಿಸುತ್ತಾಳೆ. ಮಗುವಾದರೆ ನಮ್ಮ ನಡುವೆ ಎಲ್ಲವೂ ಸರಿಹೋಗಬಹುದಾ?

ಉ : ಹೆಂಡತಿಯ ಜೊತೆಗೆ ನಿಮಗೂ ಈಗ ಜೀವನೋತ್ಸಾಹ ಕಡಿಮೆಯಾಗಿದೆ ಅಂತಲೇ ಅನ್ನಬೇಕು. ನಿಮಗಿನ್ನೂ ಮದುವೆಯಾಗಿ ಎರಡು ವರ್ಷವಾಗಿದೆಯಷ್ಟೇ. ಈಗಲೇ ಯಾಕೀ ವೈರಾಗ್ಯ? ಇಷ್ಟು ಬೇಗ ಸಂಗಾತಿ, ವೈವಾಹಿಕ ಜೀವನದಲ್ಲಿ ಆಸಕ್ತಿ ಕಳೆದುಕೊಂಡರೆ ಹೇಗೆ? ನಿಮ್ಮಿಬ್ಬರ ನಡುವಿನ ಈ ಅಂತರಕ್ಕೆ ಮೂಲ ಯಾವುದು ಅಂತ ಮೊದಲು ಕಂಡುಹಿಡಿಯಿರಿ. ನಿಮ್ಮಾಕೆ ಕೆಲಸದ ಒತ್ತಡದಿಂದ ನಿಮ್ಮಿಂದ ದೂರವಾಗುತ್ತಿದ್ದರೆ ಮೊದಲು ಅವಳ ಕಡೆ ಗಮನ ಕೊಡಿ. ನಿಮಗೆಲ್ಲೆಲ್ಲಿ ಸಾಧ್ಯವೋ ಅಲ್ಲಿ ನಿಮ್ಮ ಸಹಾಯ ಹಸ್ತ ನೀಡಿ. ಜೊತೆಯಲ್ಲೇ ಏನಾದರೂ ಹಾಸ್ಯವಾಗಿ ಮಾತಾಡ್ತಾ ಕೆಲಸ ಮಾಡಿದರೆ ಅದರ ಒತ್ತಡವೂ ಗೊತ್ತಾಗುವುದಿಲ್ಲ. ಜೊತೆಗೇ ನೀವಿಬ್ಬರೂ ಸಮಯವನ್ನು ಒಟ್ಟಿಗೇ ಕಳೆದಂತೂ ಆಗುತ್ತದೆ. ನೀವಿಬ್ಬರೂ ದುಡಿಯುವುದರಿಂದ ಮನೆಕೆಲಸಕ್ಕೆ ಒಂದರ್ಧ ದಿನವಾದರೂ ರಜೆಕೊಟ್ಟು ಹೊರಗಡೆ ಸುತ್ತಾಡಿ ಅಲ್ಲಿಯೇ ಊಟ ಮುಗಿಸಿ ಬಂದರೆ ಅಷ್ಟರಮಟ್ಟಿಗೆ ನೀವಿಬ್ಬರೂ ರಿಲ್ಯಾಕ್ಸ್ ಆಗುತ್ತೀರಿ. ಆಗಾಗ ಚಿಕ್ಕಚಿಕ್ಕ ಪಿಕ್ನಿಕ್ಕಿಗೆ ಹೋಗ್ತಾ ಇಲ್ಲಾ ಜೊತೆಯಲ್ಲೇ  ಶಾಪಿಂಗ್ ಮಾಡ್ತಾ ನಿಮ್ಮ ಸಂಬಂಧವನ್ನು ತಾಜಾಗೊಳಿಸಿಕೊಳ್ಳುತ್ತಿರಿ. ಮಗುವಿನ ಬಗ್ಗೆ ಯೋಚಿಸಲೂ ಇದು ಸರಿಯಾದ ಸಮಯವೇ — ಮಗುವನ್ನು ಬೆಳೆಸುವ ಜವಾಬ್ದಾರಿಯಲ್ಲಿ ನೀವೂ ಪಾಲುದಾರ ರಾಗುವುದಾದರೆ ಮಾತ್ರ.

 

LEAVE A REPLY