ಹೆಂಡತಿಗೆ ನನ್ನ ಬಗ್ಗೆ ಗೌರವವೇ ಇಲ್ಲ

ಪ್ರ : ಮದುವೆಯಗಿ ಮೂರು ವರ್ಷವಾಯಿತು. ಚಿಕ್ಕ ಮಗುವಿದೆ. ನಮ್ಮ ಮನೆಯಲ್ಲಿ ಇರುವುದು ನಾವಿಬ್ಬರು ಮತ್ತು ಮಗು ಮಾತ್ರವಾದರೂ ದಿನನಿತ್ಯ ಯಾವುದಾದರೂ ವಿಷಯಕ್ಕೆ ಮನೆಯಲ್ಲಿ ರಂಪಾಟವಾಗುತ್ತಿರುತ್ತದೆ. ನಾನು ಎಷ್ಟೇ ಸಮಾಧಾನದಲ್ಲಿ ಇರಬೇಕು ಅಂದುಕೊಂಡರೂ ಹೆಂಡತಿ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಾಳೆ. ಅವಳಿಗೆ ನಾನು ಹೇಳಿದ್ದು ಒಂದೂ ಸರಿಬರುವುದಿಲ್ಲ. ಏನು ಹೇಳುತ್ತೇನೆ ಮತ್ತು ಯಾಕೆ ಹೇಳುತ್ತೇನೆ ಅಂತ ಕೇಳಿಸಿಕೊಳ್ಳಲೂ ತಯಾರಿಲ್ಲದೇ ಪ್ರತಿಯೊಂದಕ್ಕೂ ಉಲ್ಟಾವೇ ಹೊಡೆಯುತ್ತಾಳೆ. ನನಗಿಷ್ಟವಾದ ಏನಾದರೂ ಮಾಡು ಅಂತ ಹೇಳಿದರೆ ಅದಕ್ಕೆ ತದ್ವಿರುದ್ಧವೇ ಅವಳು ಮಾಡುವುದು. ಅದೂ ಅಲ್ಲದೇ ಅವಳಿಗೆ ನನ್ನ ಕುಟುಂಬದವರ್ಯಾರೂ ಇಷ್ಟವಾಗುವುದಿಲ್ಲ. ಅವರ ಜೊತೆ ನಾನು ಸಂಪರ್ಕದಲ್ಲಿರುವುದನ್ನೂ ಸಹಿಸುವುದಿಲ್ಲ. ನಮ್ಮ ಮನೆಗೆ ಹೋದರೆ ಅಲ್ಲಿ ಅರ್ಧ ಘಂಟೆಯೂ ಇರಲಿಕ್ಕೆ ಅವಳು ತಯಾರಿಲ್ಲ. ಅದಕ್ಕೆ ಸರಿಯಾಗಿ ಅವಳ ತವರಿರುವುದೂ ಇದೇ ಊರಿನಲ್ಲಿ. ಅವಳ ಅಮ್ಮನಂತೂ ಅವಳು ಮಾಡಿದ್ದಕ್ಕೆಲ್ಲ ಕುಮ್ಮಕ್ಕು ಕೊಟ್ಟು ನನ್ನನ್ನೇ ನಿರ್ಲಕ್ಷಿಸಲು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾಳೆ. ಮಗುವನ್ನು ಬೆಳೆಸುವುದರಲ್ಲೂ ನನ್ನ ಮಾತಿಗೆ ಬೆಲೆಯಿಲ್ಲ. ಮಗುವಿನ ಒಳಿತಿನ ದೃಷ್ಟಿಯಲ್ಲಿ ನಾನು ಏನಾದರೂ ಹೇಳಿದರೂ ಅವಳು ಅದಕ್ಕೆ ಸ್ಪಂದಿಸುತ್ತಿಲ್ಲ. ಯಾಕಾದರೂ ಆರೇಂಜ್ಡ್ ಮ್ಯಾರೇಜ್ ಆದೆನೇನೋ ಅನಿಸುತ್ತಿದೆ. ಈ ಸಮಸ್ಯೆಗೆ ಪರಿಹಾರ ಇದೆಯಾ?

ಉ :  ನಿಮ್ಮ ದಾಂಪತ್ಯದಲ್ಲಿ ಈ ರೀತಿ ಸಮಸ್ಯೆ ಬರಲು ಅವಳೊಬ್ಬಳೇ ಕಾರಣವಲ್ಲ, ನಿಮ್ಮ ಅತೀವ ಸಹನೆಯೂ ಅವಳು ಹೀಗಾಗಲಿಕ್ಕೆ ಕಾರಣವಿರಬಹುದು. ಅವಳು ತಪ್ಪು ಮಾಡುತ್ತಿದ್ದರೆ ಅದನ್ನು ಅಲ್ಲಿಯೇ ಖಂಡಿಸಿ ಸರಿಪಡಿಸಿಕೊಳ್ಳಬೇಕಿತ್ತು. ಈಗ ಅವಳು ನಿಮ್ಮ ಹಿಡಿತಕ್ಕೆ ಸಿಗದಷ್ಟು ಬೆಳೆದುಬಿಟ್ಟಿದ್ದಾಳೆ. ಇನ್ನಾದರೂ ನೀವು ಸ್ವಲ್ಪ ಸ್ಟ್ರಾಂಗ್ ಆಗಿ. ಅವಳ ಜೊತೆ ಕುಳಿತು ಮಾತಾಡಿ. ನಿಮಗೆ ಅವಳ ಬಗ್ಗೆ ಇರುವ ಅಸಮಧಾನವನ್ನು ಸ್ಪಷ್ಟ ಶಬ್ಧಗಳಲ್ಲಿ ಅವಳಿಗೆ ವಿವರಿಸಿ. ಅವಳ ಆ ರೀತಿಯ ನಡೆವಳಿಕೆಯನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಅಂತ ಖಡಕ್ಕಾಗಿಯೇ ಹೇಳಿ. ಅದರರ್ಥ ಅವಳ ಮೇಲೆ ದಬ್ಬಾಳಿಕೆ ಮಾಡಬೇಕೆಂದಲ್ಲ. ನ್ಯಾಯವಾಗಿ ಅವಳು ಮಾಡಬೇಕಾದ್ದನ್ನು ಮಾಡದೇ ಅದಕ್ಕೆ ವ್ಯತಿರಿಕ್ತವಾಗಿ ನಡೆದರೆ ಅದರಿಂದಾಗುವ ಪರಿಣಾಮಕ್ಕೆ ಅವಳೇ ಜವಾಬ್ದಾರಳು ಅಂತ ತಿಳಿಸಿ ಹೇಳಿ. ಅವಳು ಹೇಗೆ ತನ್ನ ಕುಟುಂಬವನ್ನು ಪ್ರೀತಿಸುತ್ತಾಳೋ ಹಾಗೇ ನಿಮ್ಮ ಕುಟುಂಬದವರ ಜೊತೆಗಿನ ಮೈತ್ರಿಯೂ ಅಗತ್ಯ ಅಂತ ತಿಳಿಸಿ.  ತವರಿನವರಿಂದ ನಿಮ್ಮ ಹೆಂಡತಿ ಮತ್ತಿಷ್ಟು ಜಗಳಗಂಟಿಯಾಗುತ್ತಿದ್ದಾಳೆ ಅಂತ ಅನಿಸಿದರೆ ಅವರ ಜೊತೆಗಿನ ಸಂಪರ್ಕವನ್ನು ಕಡಿಮೆಗೊಳಿಸಲು ಪ್ರಯತ್ನಿಸಿ. ಅವರ ಪಾಲಕರ ಜೊತೆಯೂ ಈ ರೀತಿಯ ನಡೆವಳಿಕೆ ಸರಿಯಲ್ಲ ಅಂತ ನಿಮ್ಮ ಅಸಮಾಧಾನ ವ್ಯಕ್ತಪಡಿಸಿ. ಅಳಿಯ ಮಗಳಿಂದ ದೂರವಾಗಬಹುದು ಅನ್ನುವ ಹೆದರಿಕೆಯಿಂದಲಾದರೂ ಅವಳ ಮನೆಯವರು ತಾವೂ ಸರಿಹೋಗಿ ಮಗಳನ್ನೂ ತಿದ್ದಲು ಪ್ರಯತ್ನಿಸಬಹುದು.