ಬರಗಾಲ ಪೀಡಿತ ಗ್ರಾಮದ ದನಗಳ ವ್ಯಥೆಯ ಕಥೆ

ಸಾಂದರ್ಭಿಕ ಚಿತ್ರ

ಗ್ರಾಮದ ಪವಿತ್ರ ಹೋರಿಗೂ ಗೋಶಾಲೆಯೇ ಗತಿಯಾಗಿ ಬಿಟ್ಟಿದೆ

  • ಆಶಾ ಮೆನನ್

ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನಲ್ಲ್ ಎಂಬ ಗ್ರಾಮದಲ್ಲಿ ವಿಶಿಷ್ಟ ಆಚರಣೆಯೊಂದಿದೆ. ಈ ಗ್ರಾಮದ ಜನರು ದೇವರಿಗೆ ಯಾವುದೇ ವಿಶೇಷ ಪೂಜೆ ಸಲ್ಲಿಸಿವಾಗ  ಅಥವಾ ಮಾಡಿದ ತಪ್ಪಿಗೆ ದೇವರಲ್ಲಿ ಕ್ಷಮೆಯಾಚಿಸುವಾಗ ಹರಕೆಯ ರೂಪದಲ್ಲಿ ಹೋರಿಯೊಂದನ್ನು ಗ್ರಾಮದ ಪ್ರವೇಶದ್ವಾರದಲ್ಲಿರುವ ಹನುಮಾನ್ ದೇವಳಕ್ಕೆ ಅರ್ಪಿಸುತ್ತಾರೆ. ಹೀಗೆ ಹರಕೆಯ ರೂಪದಲ್ಲಿ ದೇವರಿಗೆ ಸಮರ್ಪಿಸಿದ ಹೋರಿಗೆ ಕೆಲವೊಂದು ವಿಶೇಷ ಸವಲತ್ತುಗಳಿವೆ. ಅದು ಗ್ರಾಮದ ಯಾವುದೇ ಜಾಗಕ್ಕೆ ಹೋಗಿಯೂ ಮೇಯಬಹುದು. ಜನರೂ ಅದಕ್ಕೆ ಮೇವು ನೀಡುತ್ತಾರೆ.

ಆದರೆ ಈ ವರ್ಷ ಈ ಗ್ರಾಮಕ್ಕೆ ತಟ್ಟಿದ ಬರಗಾಲವು ಈ ಗ್ರಾಮದ ಪವಿತ್ರ ಹೋರಿಗೂ ಸಂಕಟ ತಂದಿದೆ. ಗ್ರಾಮದ ಯಾರಿಗೂ ದನಗಳಿಗೆ ಮೇವು ಖರೀದಿಸುವ ಶಕ್ತಿಯಿಲ್ಲದಂತಾಗಿದೆ. ಹಲವರು ತಮ್ಮ ದನಗಳನ್ನು ಸಂತೆಯಲ್ಲಿ ಜುಜುಬಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಶರಣಬಸವ ಎಂಬ ಹೆಸರಿನ ಗ್ರಾಮಸ್ಥರೊಬ್ಬರು ತಮ್ಮಲ್ಲಿದ್ದ ಎರಡು ಹೋರಿ ಹಾಗೂ ಐದು ದನಗಳನ್ನು ರೂ 80,000ಕ್ಕೆ ಮಾರಾಟ ಮಾಡಿಬಿಟ್ಟಿದ್ದಾರೆ. “ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬೇರೆ ಸಮಯದಲ್ಲಿ ನನ್ನ ಎರಡು ಹೋರಿಗಳಿಗೆÀ ತಲಾ ರೂ 50,000 ದಕ್ಕುತ್ತಿತ್ತು” ಎಂದು ನಿರಾಶೆಯಿಂದ ಹೇಳುತ್ತಾರೆ ಈತ.

ಆದರೆ ದೇವಳದ ಹೋರಿಯನ್ನು ಮಾತ್ರ ಮಾರಾಟ ಮಾಡಲಾಗಿಲ್ಲ.  ಬದಲಾಗಿ ಗ್ರಾಮಸ್ಥರು ಹಣ ಸಂಗ್ರಹಿಸಿ ಅದನ್ನು ರಾಯಚೂರಿನ ಗೋಶಾಲೆಗೆ ಕಳುಹಿಸಿದ್ದಾರೆ. ಅಲ್ಲಿಗೆ ತರಲಾಗುವ ಪ್ರತಿಯೊಂದು ಆಕಳಿಗೂ ರೂ 3000 ಪಾವತಿಸಿ ಒಂದು ಲೋಡು ಮೇವು ನೀಡಿದರೆ ಮಾತ್ರ ಪ್ರವೇಶ ನೀಡಲಾಗುತ್ತದೆ. ತಮ್ಮ ದನಗಳನ್ನು ಮಾರಾಟ ಮಾಡಲಿಚ್ಛಿಸದ ಗ್ರಾಮಸ್ಥರಿಗೆ ಮೇವು ಬ್ಯಾಂಕ್ ಒಂದು ವರದಾನವಾಗಿದೆಯಾದರೂ ಇಲ್ಲಿ ಕೂಡ ಎಲ್ಲವೂ ಎಣಿಸಿದಂತಿಲ್ಲ. ದೂರದ  ಗ್ರಾಮವೊಂದರಲ್ಲಿ ಮೇವು ಬ್ಯಾಂಕ್ ಇದೆಯೆಂದು ಅಲ್ಲಿಗೆ ತೆರಳಿದ ಗ್ರಾಮಸ್ಥರೊಬ್ಬರನ್ನು ಅಲ್ಲಿನ ಜನರು ಓಡಿಸಿಬಿಟ್ಟಿದ್ದಾರೆಂಬ ಮಾಹಿತಿಯೂ ಇಲ್ಲಿ ದೊರೆಯುತ್ತದೆ. ಕೊನೆಗೆ ಆ ಗ್ರಾಮಸ್ಥ ತನ್ನ ಆಕಳನ್ನು ರಾಯಚೂರಿನ ಗೋಶಾಲೆಗೆ ಸೇರಿಸಿದ್ದ. ಅಲ್ಲಿನ ಗೋಶಾಲೆ ವಿಶಾಲವಾಗಿದ್ದರೂ ಅದರ ಪೋಷಕರು ಶ್ರೀಮಂತ ಜನರು. ಕೆಲವೊಮ್ಮೆ ದೊಡ್ಡ ಉದ್ಯಮಿಗಳು ದನಗಳನ್ನು ಖರೀದಿಸಿ  ರೂ 10,000 ಪಾವತಿಸಿ ಗೋಶಾಲೆಗೆ ಸೇರಿಸುತ್ತಾರೆ. ಹೀಗೆ ಇಲ್ಲಿ ಶ್ರೀಮಂತರ ದನಗಳಿಗೆ ಹೆಚ್ಚಿನ ಮಹತ್ವ ದೊರೆತು ಬಡವರ ದನಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆಯೆಂಬ ಆರೋಪಗಳೂ ಕೇಳಿಬರುತ್ತಿವೆ.

ಗೋನಲ್ಲ್ ಗ್ರಾಮದ ಲಿಂಗಪ್ಪ ಎಂಬವರು  ಸ್ವಲ್ಪ ಸಮಯದ ಹಿಂದೆ ತಮ್ಮ ದನವನ್ನು ಸಾಕಲಾರದೆ ಗೋಶಾಲೆಗೆ ಸೇರಿಸಿದ್ದರು. ಒಂದು ತಿಂಗಳ ನಂತರ ಅವರು ತಮ್ಮ ದನ ಹೇಗಿದೆಯೆಂದು ನೋಡಲು ಅತ್ತ ತೆರಳಿದಾಗ ಅದು ಅಲ್ಲಿರಲಿಲ್ಲ. ಅದನ್ನು ಸಿಂಧನೂರು ಎಂಬಲ್ಲಿನ ಗೋಶಾಲೆಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಲಿಂಗಪ್ಪಗೆ ಚಿಂತೆ ಶುರುವಾಗಿದೆ. ಸಿಂಧನೂರಿನ ಗೋಶಾಲೆಯಲ್ಲಿ ಮೂರು ವರ್ಷಗಳ ಹಿಂದೆ 58 ದನಗಳು ಸತ್ತಿವೆಯೆಂಬ ಸುದ್ದಿಯೇ ಅವರ ಚಿಂತೆಗೆ ಮೂಲ ಕಾರಣ.

ಗ್ರಾಮಸ್ಥರಿಗಿರುವ ಇನ್ನೊಂದು ಆಯ್ಕೆಯೆಂದರೆ ಆಹಾರವಿಲ್ಲದ ತಮ್ಮ ದನಗಳನ್ನು ಹಾಗೆಯೇ ರಸ್ತೆಗಳಲ್ಲಿ ಬಿಟ್ಟುಬಿಡುವುದು. ಆದರೆ  ಕೆಲವೊಮ್ಮೆ ಹೀಗೆ ಬಿಟ್ಟು ಬಿಟ್ಟ ದನಗಳು ರಸ್ತೆ ಅಪಘಾತಗಳಲ್ಲಿ ಸತ್ತು ಹೋದ ನಿದಶರ್Àನಗಳೂ ಇವೆ. ಅಂತೂ ಬರಗಾಲವು ಜನರೊಂದಿಗೆ ಈ ಬಡಪಾಯಿ ಪ್ರಾಣಿಗಳಿಗೂ ಅತೀವ ಸಂಕಷ್ಟವೊದಗಿಸಿದೆ.