ನಾರಾಯಣ ಗುರು ಅಧ್ಯಯನ ಪೀಠದ ಕತೆ

ಸಾಂದರ್ಭಿಕ ಚಿತ್ರ

ಮಂಗಳೂರು ವಾರ್ಸಿಟಿಯಲ್ಲಿ ಇಂದು ಸೀಎಂ ಸಿದ್ದರಾಮಯ್ಯ ಪೀಠಕ್ಕೆ ಚಾಲನೆ ನೀಡಲಿದ್ದಾರೆ

ವಿಶೇಷ ವರದಿ

ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅನುದಾನದಲ್ಲಿ ಮೂರು ದಶಕಗಳ ಹಳೆಯ ಎರಡು ಯೋಜನೆಗಳಿಗೆ ಎರಡು ದಿನಗಳ ಹಿಂದೆ ನಗರದಲ್ಲಿ ಚಾಲನೆ ನೀಡಲಾಗಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೇರಳದ ಸಮಾಜ ಸುಧಾರಕ, ಕುದ್ರೋಳಿ ಗೋಕರ್ಣ ದೇವಸ್ಥಾನದ ಸ್ಥಾಪಕ ಶ್ರೀ ನಾರಾಯಣ ಗುರು ಹೆಸರಿನಲ್ಲಿ ಅಧ್ಯಯನ ಪೀಠವೊಂದಕ್ಕೆ ಚಾಲನೆ ನೀಡಲಿದ್ದಾರೆ.

2013-14ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟಿನಲ್ಲಿ ಶ್ರೀನಾರಾಯಣ ಗುರು ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಈಗಾಗಲೇ ಎರಡು ಕೋಟಿ ರೂಪಾಯಿ ಅನುದಾನ ಕೂಡ ಮಂಜೂರಾಗಿದೆ. ಆದರೆ, ನಾಲ್ಕು ವರ್ಷಗಳು ಕಳೆದರೂ ಪೀಠಕ್ಕೆ ಮಾತ್ರ ಚಾಲನೆ ದೊರೆಯಲಿಲ್ಲ.

ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಎಷ್ಟು ಸಮಯ ಬೇಕು ಎಂಬುದನ್ನು ಕೊಂಕಣಿ ಅಧ್ಯಯನ ಪೀಠ ತೋರಿಸಿಕೊಟ್ಟಿದೆ. ಮುಖ್ಯಮಂತ್ರಿಯವರು 2015-2016ರ ಬಜೆಟಿನಲ್ಲಿ ಕೊಂಕಣಿ ಪೀಠಕ್ಕೆ ಅನುದಾನ ನಿಗದಿ ಮಾಡಿದ್ದರು. ಪ್ರಕಟಣೆಯಾದ ಮೂರು ತಿಂಗಳಲ್ಲಿ 2015 ಜೂನ್ 10ರಂದು ಕೊಂಕಣಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿತು. ಕೊಂಕಣಿ ಸಾಹಿತ್ಯ ಅಕಾಡಮಿ ನಗರದಲ್ಲಿ ಇರುವಾಗ ಮತ್ತೊಂದು ಪೀಠ ಅನಿವಾರ್ಯ ಅಲ್ಲದಿದ್ದರೂ, ಅಕಾಡಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು ವಿಶೇಷ ಮುತುವರ್ಜಿ ವಹಿಸಿ ಪೀಠವನ್ನು ಆರಂಭಿಸಿರುವುದು ಸ್ವಾಗತಾರ್ಹ.

ಆದರೆ, ನಾರಾಯಣ ಗುರು ಹೆಸರಿನಲ್ಲಿ ರಾಜಕೀಯ ನಡೆಸುವ, ಪೆÇಳ್ಳು ಭಾಷಣ ಮಾಡುವ ದೊಡ್ಡ ಸಮುದಾಯವೇ ಇದ್ದರೂ ಪೀಠ ಸ್ಥಾಪನೆಗೆ ಕಿಂಚಿತ್ತೂ ಪ್ರಯತ್ನ ನಡೆಸಲಿಲ್ಲ. ನಾರಾಯಣ ಗುರುಗಳ ಹೆಸರು ಹೇಳಿಯೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಮುಂತಾದ ಸಮಿತಿಗಳಲ್ಲಿ ಸದಸ್ಯರಾದ ಹಿಂದುಳಿದ ವರ್ಗದ ನಾಯಕರೆನಿಸಿಕೊಂಡವರು ಕೂಡ ಪ್ರಯತ್ನ ಮಾಡಲಿಲ್ಲ. ಕೊನೆಗೆ, ಬಿಲ್ಲವರು ಸೇರಿದಂತೆ ಬಹುಸಂಖ್ಯಾತ ಹಿಂದುಳಿದ ವರ್ಗದವರ ಓಟುಗಳಿಂದ ಚುನಾವಣೆ ಗೆಲ್ಲುವ ಮಂತ್ರಿಗಳು ಮತ್ತು ಶಾಸಕರು ಕೂಡ ನಾರಾಯಣ ಗುರುವನ್ನು ಕೈಬಿಟ್ಟರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರು ಪೀಠ ಸ್ಥಾಪನೆ ಆಗಬೇಕೆಂದು 2008ರಲ್ಲೇ ಸಿಂಡಿಕೇಟ್ ತೀರ್ಮಾನ ಆಗಿತ್ತು. ಪೀಠ ಸ್ಥಾಪನೆ ಆಗಬೇಕೆಂಬ ಪ್ರಸ್ತಾವನೆಯನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮುಂದಿಟ್ಟವರು ಗುರುಗಳ ಚಿಂತನೆಯಿಂದ ಪ್ರಭಾವಿತರಾಗಿದ್ದ ಪಿ ವಿ ಮೋಹನ್. ಪೀಠವನ್ನು ಕೂಡಲೇ ಆರಂಭಿಸದಿದ್ದರೆ ಆಡಳಿತ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಮತ್ತೊಮ್ಮೆ ಭೇಟಿಯಾಗಿ ಮೋಹನ ಮನವರಿಕೆ ಮಾಡಿದ್ದರು.

ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಓಟು ಬ್ಯಾಂಕ್ ಬಳಿಸಿಯೇ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆದವರು ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೊದಲೇ ಅಹಿಂದ ಘೋಷಣೆಯ ಸಮಾವೇಶ ಮಾಡಿದವರು ಸಿದ್ದರಾಮಯ್ಯ. ಇಲ್ಲಿಯ ಲೋಕಲ್ ಹೈಕಮಾಂಡ್ ಧಿಕ್ಕರಿಸಿ ಪಾದಯಾತ್ರೆ ಕೂಡ ಮಾಡಿದರು. ಆದರೆ, ಸಿದ್ದರಾಮಯ್ಯರ ಅಹಿಂದ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಬರಲಿಲ್ಲ.

ಮುಖ್ಯಮಂತ್ರಿಯಾದ ಅನಂತರ ನೀಡಿದ ಮೊದಲ ಪರಿಷ್ಕೃತ ಬಜೆಟಿನಲ್ಲಿ ಕರಾವಳಿಯ ಪಾಲಿಗೆ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನೀಡಿದರು. ಮಾತ್ರವಲ್ಲದೆ, ಸಾಮಾಜಿಕವಾಗಿ ಶ್ರೀ ನಾರಾಯಣ ಗುರುಗಳ ಸಂದೇಶಗಳು ರಾಜ್ಯದಲ್ಲೂ ಹರಡಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಎರಡು ಕೋಟಿ ರೂಪಾಯಿ ನೀಡಿದರು. ಇಲ್ಲಿನ ಬಹುಸಂಖ್ಯಾತರು ಗೌರವಿಸಿ ಆರಾಧಿಸುವ ಐತಿಹಾಸಿಕ ವೀರ ಪುರಷರಾದ ಕೋಟಿ ಚೆನ್ನಯ, ಹುಟ್ಟೂರು ಪಡುಮಲೆ ಪ್ರದೇಶದ ಅಭಿವೃದ್ಧಿ ಮೊದಲ ಕಂತು ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿದರು. ಕುಳಾಯಿ ಬಂದರು ಸೇರಿದಂತೆ ಬಹುತೇಕ ಯಾವ ಕಾರ್ಯಕ್ರಮಗಳು ಅನುಷ್ಠಾನ ಮಾತ್ರ ಆಗಿಲ್ಲ.