ತಂಗಿಯ ಪ್ರೇಮಿ ಇಷ್ಟವಾಗುತ್ತಿಲ್ಲ

 

ಪ್ರ : ನನ್ನ ತಂಗಿಗಿನ್ನೂ 21. ಅವಳು ಒಂದು ಹುಡುಗನನ್ನು ಪ್ರೀತಿಸುತ್ತಿದ್ದಾಳೆ. ಅವನನ್ನೇ ಮದುವೆಯಾಗಬೇಕೆನ್ನುವ ತರಾತುರಿಯಲ್ಲಿ ಇದ್ದಾಳೆ. ಅವಳೀಗ ಡಿಗ್ರಿ ಪೂರೈಸಿ ಚಿಕ್ಕ ಕೆಲಸದಲ್ಲಿ ಇದ್ದಾಳೆಯಷ್ಟೇ. ಅವಳಿಗೆ ಜೀವನದಲ್ಲಿ ಸ್ವಲ್ಪವೂ ಮಹತ್ವಾಕಾಂಕ್ಷೆ ಇಲ್ಲ.  ನಮ್ಮ ಅಪ್ಪ, ಅಮ್ಮನೂ ಅವಳ ತಾಳಕ್ಕೆ ಸರಿಯಾಗಿ ಕುಣಿಯುತ್ತಿದ್ದಾರೆ. ಅವರ ಮುದ್ದಿನ ಮಗಳು ಅವಳು. ಆ ಹುಡುಗನೂ ಬರೀ ಡಿಗ್ರಿ ಹೋಲ್ಟರ್ ಅಷ್ಟೇ. ಮಧ್ಯಮ ವರ್ಗಕ್ಕೆ ಸೇರಿದ ಸಾಧಾರಣ ಸಂಬಳ ಪಡೆಯುವ ಹುಡುಗ ಅವನು. ಆದರೂ ಮನೆಯವರು ಅವಳನ್ನು ಅವನಿಗೆ ಕೊಟ್ಟು ಮದುವೆ ಮಾಡಲು ಹೊರಟಿದ್ದಾರೆ. ನನಗೆ ಆ ಹುಡುಗ ಸ್ವಲ್ಪವೂ ಹಿಡಿಸಿಲ್ಲ. ನಾನಂತೂ ಅಂತಹ ಹುಡುಗರನ್ನು ಕಣ್ಣೆತ್ತಿಯೂ ನೋಡಲಿಕ್ಕಿಲ್ಲ. ನನಗೀಗ 28 ವರ್ಷ. ನನಗೆ ಸರಿಯಾದವರು ಸಿಕ್ಕಿಲ್ಲ ಅಂತ ಇನ್ನೂ ಮದುವೆಯಾಗಿಲ್ಲ. ಮನೆಯವರು ನೋಡುವ ಆರ್ಡಿನರಿ ಹುಡುಗರ್ಯಾರೂ ನನಗೆ ಇಷ್ಟವಾಗದ ಕಾರಣ ನಾನಿನ್ನೂ ಮದುವೆಯಾಗಿಲ್ಲ. ನಾನೀಗ ಒಳ್ಳೆಯ ಸಂಬಳ ತರುವ ನೌಕರಿಯಲ್ಲಿ ಇದ್ದೇನೆ. ನನಗೆ ತಕ್ಕವರು ಸಿಗದ ಹೊರತು ಬಿಲ್‍ಕುಲ್ ಮದುವೆಯಾಗುವುದಿಲ್ಲ ಅಂತ ಮನೆಯವರಿಗೆ ಹೇಳಿಬಿಟ್ಟಿದ್ದೇನೆ. ಈಗ ತಂಗಿಯ ಮದುವೆ ವಿಚಾರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲವಾಗಿದೆ. ಅವರು ಇಷ್ಟು ಬೇಗ ಅಂತಹ ಹುಡುಗನೊಂದಿಗೆ ಅವಳ ಮದುವೆ ಮಾಡುವುದು ಸರಿನಾ?

ಉ : ಪ್ರತಿಯೊಬ್ಬರಿಗೂ ಅವರದೇ ಆದ ಇಷ್ಟಾನಿಷ್ಠ ಇರುತ್ತದಲ್ಲಮ್ಮಾ. ನಿಮ್ಮ ಜೀವನಮೌಲ್ಯವೇ ಬೇರೆ, ಅವಳದೇ ಬೇರೆ. ಅವಳು ಮಧ್ಯಮವರ್ಗದ ಸಾದಾಸೀದಾ ಹುಡುಗಿ. ತಕ್ಕಮಟ್ಟಿನ ವಿದ್ಯಾಭ್ಯಾಸ ಪಡೆದು ಚಿಕ್ಕ ನೌಕರಿ ಹಿಡಿದು ತನಗೆ ಸ್ಪಂದಿಸಬಲ್ಲ ಹುಡುಗನೊಂದಿಗೆ ತೃಪ್ತಿಯ ಜೀವನ ನಡೆಸುವ ಇಚ್ಛೆ ಆಕೆಯದು. ಅದನ್ನು ತಪ್ಪು ಅಂತ ನೀವ್ಯಾಕೆ ಭಾವಿಸುತ್ತೀರಿ? ಆ ಹುಡುಗ ನಿಮಗೆ ಇಷ್ಟವಾಗದಿದ್ದರೂ ಮದುವೆಯಾಗುವ ನಿಮ್ಮ ತಂಗಿಗೆ ಹಿಡಿಸಿದರೆ ಆಯಿತು. ಅಷ್ಟಕ್ಕೂ ನಿಮ್ಮ ತಾಯಿ-ತಂದೆಯೂ ಮೆಚ್ಚಿದ್ದಾರಲ್ಲಾ. ಸುಖಸಂತೋಷ ಅನ್ನುವುದು ಅವರವರ ಮನಸ್ಥಿತಿಗೆ ಸಂಬಂಧಪಟ್ಟಿದ್ದು. ಕೆಲವರಿಗೆ ಏನೇ ಇದ್ದರೂ ಎಷ್ಟೇ ಎಂಜಾಯ್ ಮಾಡಿದರೂ ತೃಪ್ತಿ ಅನ್ನುವುದು ಇರುವುದಿಲ್ಲ. ಮರೀಚಿಕೆಯ ಬೆನ್ನು ಹತ್ತುವವರೂ ಇರುತ್ತಾರೆ. ನೀವು ಮಧ್ಯಮವರ್ಗದಲ್ಲಿ ಹುಟ್ಟಿದರೂ ಹೈಕ್ಲಾಸ್ ಜೀವನ ಬಯಸುವವರು. ಅದನ್ನು ಸಾಧಿಸಿದರೇ ನಿಮಗೆ ಸಮಾಧಾನ. ಅದನ್ನು ಸಾಕಾರಗೊಳಿಸಿಕೊಳ್ಳುವುದು ನಿಮ್ಮ ವೈಯಕ್ತಿಕ ಹಕ್ಕಿಗೆ ಬಿಟ್ಟ ವಿಚಾರ. ಅದನ್ನು ಹೇಗೆ ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲವೋ ಹಾಗೇ ನಿಮ್ಮ ತಂಗಿಯ ಇಷ್ಟಕ್ಕೂ ನೀವು ವಿರೋಧಿಸುವುದು ಸರಿಯಲ್ಲ. ಅಕ್ಕನಾದ ನಿಮ್ಮ ಮದುವೆಯಾಗದೇ ಅವಳಿಗೆ ಮದುವೆ ಮಾಡುವುದು ಅಷ್ಟೊಂದು ಸಮಂಜಸವಲ್ಲದಿದ್ದರೂ ನೀವು ನಿಮ್ಮ ಕನಸಿನ ಹುಡುಗ ಸಿಗದ ಹೊರತು ಮದುವೆಯಾಗುವುದಿಲ್ಲ ಅಂತ ಕುಳಿತು ಸ್ವಲ್ಪವೂ ಕಾಂಪ್ರಮೈಸ್‍ಗೆ ತಯಾರಿಲ್ಲದಿದ್ದರೆ ಆಕೆ ಮದುವೆಗೆ ನೀವು ಅಡ್ಡ ಬರುವುದೂ ಸರಿಯಲ್ಲ.

LEAVE A REPLY