ಅತ್ತಿಗೆಯ ತಮ್ಮ ಕಿರುಕುಳ ಕೊಡುತ್ತಿದ್ದಾನೆ

ಪ್ರ : ನಾನು ಕಾಲೇಜಿನಲ್ಲಿ ಓದುವ ಹುಡುಗಿ. ನಮ್ಮ ಊರಿನಲ್ಲಿ ಕಾಲೇಜು ಇಲ್ಲ. ಅಣ್ಣ ಅತ್ತಿಗೆ ಶಹರದಲ್ಲಿ ಮನೆ ಮಾಡಿಕೊಂಡು ಇದ್ದಾರೆ. ಅವರಿಬ್ಬರೂ ಜಾಬ್ ಮಾಡುತ್ತಿದ್ದಾರೆ. ನಾನು ಅವರ ಜೊತೆಯಿದ್ದು ಈಗ ಓದುತ್ತಿದ್ದೇನೆ. ಅಣ್ಣ ಅತ್ತಿಗೆ ನನ್ನನ್ನು ಚೆನ್ನಾಗಿಯೇ ನೋಡಿ ಕೊಳ್ಳುತ್ತಿದ್ದಾರೆ. ಅಣ್ಣ ನನಗಿಂತ ಹತ್ತು ವರ್ಷ ದೊಡ್ಡವನಾದ್ದರಿಂದ ಅವನ ಜೊತೆ ಸಲುಗೆ ಕಡಿಮೆ. ಎಲ್ಲದಕ್ಕೂ ಅತ್ತಿಗೆಯನ್ನೇ ಡಿಪೆಂಡ್ ಆಗಿದ್ದೇನೆ. ಎರಡು ವರ್ಷ ಯಾವ ಅಡೆತಡೆಯಿಲ್ಲದೇ ಕಾಲೇಜು ಜೀವನ ಕಳೆದೆ. ಆದರೆ ಈ ವರ್ಷ ಒಂದು ರೀತಿಯ ಕಿರಿಕಿರಿ ಅನುಭವಿಸುತ್ತಿದ್ದೇನೆ. ಅತ್ತಿಗೆಯ ತಮ್ಮನಿಗೆ ಇದೇ ಊರಿಗೆ ವರ್ಗವಾಗಿದೆ. ಅವನು ನಮ್ಮ ಮನೆಯ ಸ್ವಲ್ಪ ದೂರದಲ್ಲಿ ರೂಂ ಮಾಡಿಕೊಂಡು ಇದ್ದಾನೆ. ಆಗಾಗ ನಮ್ಮ ಮನೆಗೆ ಬರುತ್ತಾನೆ. ಅತ್ತಿಗೆಗೆ ಅವನು ಬಂದರೆ ರೆಕ್ಕೆ ಬಂದವರ ಹಾಗೆ ವರ್ತಿಸುತ್ತಾರೆ. ಅವರಿಗೆ ಅವನನ್ನು ಎಷ್ಟು ಉಪಚರಿಸಿದರೂ ಸಾಕಾಗುವುದಿಲ್ಲ. ಅದಾದರೂ ನನಗೆ ತೊಂದರೆ ಇಲ್ಲ. ಆದರೆ ಅವನು ನನ್ನ ಜೊತೆ ಅತೀ ಸಲುಗೆಯಿಂದ ವರ್ತಿಸಲು ನೋಡುತ್ತಾನೆ. ಕೆಲವೊಮ್ಮೆ ಅವನು ಅಣ್ಣ ಅತ್ತಿಗೆ ಮನೆಯಲ್ಲಿ ಇಲ್ಲದ ಸಮಯದಲ್ಲೂ ಬರುತ್ತಾನೆ. ಅವನ ನೋಟವೇ ನನಗೆ ಇಷ್ಟವಾಗುವುದಿಲ್ಲ. ನನ್ನ ಪಕ್ಕದಲ್ಲಿ ಬಂದು ಕೂರುವುದು, ಮೈಕೈ ಮುಟ್ಟಲು ಹವಣಿಸುವುದು, ಡಬ್ಬಲ್ ಮೀನಿಂಗ್ ಇಟ್ಟು ಮಾತಾಡುವುದು ಮಾಡುತ್ತಿರುತ್ತಾನೆ. ಮನೆಯಲ್ಲಿ ಉಳಿದವರು ಇದ್ದರೆ ಸರಿಯಾಗಿರುತ್ತಾನೆ. ನನಗೆ ಈ ವಿಷಯ ಅಣ್ಣ, ಅತ್ತಿಗೆಗೆ ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಾನೆ. ನಾನು ಅವನ ಹತ್ತಿರ ಮಾತಾಡದಿದ್ದರೂ ಏನಾದರೂ ಹಲುಬುತ್ತಾ ಹತ್ತಿರವಾಗಲು ಪ್ರಯತ್ನಿಸುತ್ತಾನೆ. ಏನು ಮಾಡಲಿ ನನು?

: ಕೆಲವು ಹೆಣ್ಣುಮಕ್ಕಳು ಹೊರಗಿನವರಿಗಿಂತ ಕುಟುಂಬ ದವರಿಂದಲೇ ಕಿರುಕುಳ ಅನುಭವಿಸುವುದು ಜಾಸ್ತಿ. ಅದೂ ಈ ರೀತಿಯ ಲೈಂಗಿಕ ಕಿರುಕುಳವನ್ನು ಅನುಭವಿಸುವುದೂ ಕಷ್ಟ, ಉಳಿದವರಲ್ಲಿ ಹೇಳುವುದೂ ಕಷ್ಟ. ನಿಮ್ಮ ಅತ್ತಿಗೆಗೆ ಅವರ ತಮ್ಮನ ಮೇಲೆ ಸ್ವಾಭಾವಿಕವಾಗಿಯೇ ಪ್ರೀತಿ, ನಂಬುಗೆ ಎಲ್ಲವೂ ಇರುತ್ತದೆ. ಅವರಿಗೆ ತನ್ನ ತಮ್ಮ ಈ ರೀತಿ ವರ್ತಿಸಬಹುದು ಅನ್ನುವ ಕಲ್ಪನೆಯೂ ಇರಲಿಕ್ಕಿಲ್ಲ. ಇಂತಹ ಸೂಕ್ಷ್ಮವಿಚಾರವನ್ನು ಹೇಳುವಾಗ ನಿಮಗೆ ಧರ್ಮಸಂಕಟವಾಗುವುದು ಸಹಜ. ಆದರೂ ನೀವೀಗ ಸುಮ್ಮನಿದ್ದರೆ ಪರಿಸ್ಥಿತಿ ಮತ್ತೂ ಬಿಗಡಾಯಿಸಬಹುದು. ಮೊದಲು ನೀವು ಸ್ವಲ್ಪ ಖಾರವಾಗಿಯೇ ಅತ್ತಿಗೆಯ ತಮ್ಮನಿಗೆ ವಾರ್ನ್ ಮಾಡಿ. ಅವನು ಈ ರೀತಿ ವರ್ತಿಸುವುದು ನಿಮಗೆ ಸ್ವಲ್ಪವೂ ಇಷ್ಟವಾಗುವುದಿಲ್ಲವೆಂತಲೂ, ಅದನ್ನೇ ಮುಂದುವರಿಸಿದರೆ ನಿಮ್ಮ ಅಣ್ಣ, ಅತ್ತಿಗೆಗೆ ಹೇಳುವುದಾಗಿಯೂ ಕಟುವಾಗಿಯೇ ಹೇಳಿ. ಅವನು ನಿಮ್ಮ ಕ್ಷಮೆ ಕೇಳಿ ತನ್ನನ್ನು ತಾನು ತಿದ್ದಿಕೊಂಡರೆ ಸರಿ, ಇಲ್ಲವಾದರೆ ನೀವು ಹಿರಿಯರ ಗಮನಕ್ಕೆ ತರುವುದೇ ಒಳ್ಳೆಯದು.

ಅಣ್ಣನ ಹತ್ತಿರ ಹೇಳಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎಲ್ಲರ ಸಂಬಂಧದ ಮೇಲೂ ಅದು ಪರಿಣಾಮ ಬೀರುವ ಪ್ರಮೇಯ ಇರುವುದರಿಂದ ಅತ್ತಿಗೆಯ ಹತ್ತಿರವೇ ಹೇಳಿ. ನಿಮಗೆ ಅವರ ಸಂಬಂಧಿಕರ ಬಗ್ಗೆ ಗೌರವ ಇರುವುದಾಗಿಯೂ, ಬೇರೆ ದಾರಿ ಇಲ್ಲದೇ ಈ ವಿಷಯವನ್ನು ಅವರ ಗಮನಕ್ಕೆ ತರುತ್ತಿರುವುದಾಗಿಯೂ ಹೇಳಿ. ಅತ್ತಿಗೆ ಹೇಗೂ ನಿಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುವುದರಿಂದ ಅವರ ತಮ್ಮನಿಂದ ನಿಮಗಾಗುವ ಮುಜುಗರ ಅರ್ಥಮಾಡಿಕೊಳ್ಳುತ್ತಾರೆ. ಅವರು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತಾರೆ.