24 ಗಂಟೆಯೊಳಗೆ ಅಡಿಕೆ ಕಳವು ಆರೋಪಿ ಬಂಧಿಸಿದ ಪೊಲೀಸರು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಅಡಿಕೆ ಕಳವು ನಡೆಸಿದ 24 ಗಂಟೆಯೊಳಗೆ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಬೆಟ್ಟಂಪಾಡಿಯ ಗ್ರಾಮದ ರೆಂಜದಲ್ಲಿ ರಿಜಿತ್ ಕ್ರಾಸ್ತಾ ಎಂಬವರು ತನ್ನ ಲಾರಿಯಲ್ಲಿ ಅಡಿಕೆ ಲೋಡ್ ಮಾಡಿ ನಿಲ್ಲಿಸಿ ಅದರ ಚಾಲಕರು ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಶಾಮಿಯಾನದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವ ಬೆಟ್ಟಂಪಾಡಿ ಗ್ರಾಮದ ಕಕ್ಕೂರು

ನಿವಾಸಿ ಚಂದ್ರಶೇಖರ ಎಂಬಾತ ಲಾರಿಯಲ್ಲಿದ್ದ ಮೂರು ಚೀಲ ಅಡಿಕೆಯನ್ನು ಕಳವು ಮಾಡಿದ್ದ. ಕಳವು ದೃಶ್ಯ ಸೀಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಇದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ಊರಿನಲ್ಲಿ ಹಗಲು ವೇಳೆ ಪ್ರಾಮಾಣಿಕನಂತೆ ವರ್ತಿಸುತ್ತಿದ್ದು, ರಾತ್ರಿಯಾಗುತ್ತಲೇ ಕಳವು ಕೃತ್ಯಕ್ಕೆ ಇಳಿಯುತ್ತಿದ್ದ ಎನ್ನಲಾಗಿದೆ. ಬೆಟ್ಟಂಪಾಡಿ ಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ನಡೆದ ಸಣ್ಣಪುಟ್ಟ ಕಳವು ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದು, ಪೊಲೀಸ್ ತನಿಖೆಯ ವೇಳೆ ಹೊರಬಿದ್ದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.