ಜನರೆದುರೇ ಸೀಮೆಣ್ಣೆ ಸುರಿದು ಆತ್ಮಹತ್ಯೆಗೆತ್ನ

 ಅಂಗಡಿಕಾರ ಜೀವನ್ಮರಣ ಸ್ಥಿತಿಯಲ್ಲಿ ಟಿ ಪುರಸಭೆ ಗಾಜು ಪುಡಿ, ಬಿಗು ಬಂದೋಬಸ್ತ್

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಪುರಸಭೆಯವರು ಗುರುವಾರ ಬೆಳಗಿನ ಜಾವ ಪಟ್ಟಣದಲ್ಲಿರುವ ಬಾಡಿಗೆ ಅಂಗಡಿಗಳ ಕಬ್ಜಾ ಪಡೆಯಲು ಮುಂದಾದಾಗ ಮನನೊಂದು ಪುರಸಭೆಯ ಕಚೇರಿಯಲ್ಲೇ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಂಗಡಿಕಾರ ರಾಮಚಂದ್ರ ನಾಯ್ಕ ಮಣಿಪಾಲದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

ಘಟನೆಯಿಂದ ಪ್ರಕ್ಷುಬ್ದಗೊಂಡಿದ್ದ ಭಟ್ಕಳದಲ್ಲಿ ಗುರುವಾರ ಸಂಜೆ ಹೊತ್ತಿಗೆ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿತ್ತು. ಬೆಳಿಗ್ಗೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿರುವುದರ ಜೊತೆಗೆ ಶಾಲಾ ಕಾಲೇಜು, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಬಾಗಿಲು ತೆರೆಯಲಿಲ್ಲ. ಸಂಶುದ್ದೀನ ವೃತ್ತದಲ್ಲಿ ಟೈಯರ್ ಸುಟ್ಟು ಕೆಲವರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಪ್ರತಿಭಟನಾಕಾರರನ್ನು ಸಮಾಧಾನಿಸಲು ಪೊಲೀಸ್ ಅಧಿಕಾರಿಗಳು ಹೈರಾಣಾಗಿದ್ದರು. ಪ್ರತಿಭಟನಾಕಾರರು ಎಷ್ಟೇ ಬೊಬ್ಬೆ ಹೊಡೆದರೂ ಪುರಸಭೆ ಕಟ್ಟಡದ ಕಿಟಕಿ ಗಾಜುಗಳನ್ನು ಪುಡಿಗೈದರೂ ಪೊಲೀಸರು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರೇನಾದರೂ ಲಾಟಿ ಚಾರ್ಜ್ ಹಾಗೂ ಇನ್ನಿತರ ಯಾವುದೇ ರೀತಿಯ ಕ್ರಮ ಕೈಗೊಂಡಿದ್ದರೂ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಎಲ್ಲಾ ಸಾಧ್ಯತೆ ಇತ್ತು ಎನ್ನಲಾಗಿದೆ.

ಆಕ್ರೋಶ ರಾಮಮಚಂದ್ರ ನಾಯ್ಕ ಬೆಂಕಿ ಹಚ್ಚಿಕೊಳ್ಳಲು ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಗುರುವಾರ ಬೆಳಿಗ್ಗೆ ಪುರಸಭೆ ಕಚೇರಿಯ ಶಟರ್ ತೆಗದು ಒಳನುಗ್ಗಲು ಪ್ರಯತ್ನಿಸಿ ವಿಫಲವಾದಾಗ ಮತ್ತಷ್ಟು ಆಕ್ರೋಶಗೊಂಡು ಪುರಸಭೆಯ ಕಟ್ಟಡದ ಹಾಗೂ ಬಾಡಿಗೆ ಮಳಿಗೆಗಳ ಕಿಟಕಿ ಗಾಜುಗಳನ್ನು ಕಲ್ಲೆಸೆದು ಪುಡಿಗೈದಿದ್ದಾರೆ. ಪುರಸಭೆಯ ಅಧ್ಯಕ್ಷರ ಕೊಠಡಿಯ ಕಿಟಿಕಿ ಗಾಜುಗಳನ್ನು ಸಂಪೂರ್ಣ ಪುಡಿಗೈಯ್ಯಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಪಟ್ಟು ಹಿಡಿದ ನೂರಾರು ಪ್ರತಿಭಟನಾಕಾರರು ಪುರಸಭೆಯ ಎದುರಿನ ಮುಖ್ಯರಸ್ತೆಯಲ್ಲೇ ಎರಡು ತಾಸಿಗೂ ಅಧಿಕ ಕಾಲ ಧರಣಿ ಕುಳಿತರು. ಪೊಲೀಸರು ಪರಿಸ್ಥಿತಿ ತಹಬಂದಿಗೆ ತರಲು ತೀವ್ರ ಪ್ರಯತ್ನ ನಡೆಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರೂ ಮತ್ತೆ ಮತ್ತೆ ಜನರ ಮಧ್ಯದಿಂದ ಕಲ್ಲುಗಳು ಪುರಸಭೆ ಕಟ್ಟಡದ ಕಿಟಿಕಿ ಗಾಜಿನ ಮೇಲೆ ಬಂದು ಬೀಳುತ್ತಿದ್ದವು. ವಿಡಿಯೋ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಗೂ ಸಹ ಪ್ರತಿಭಟನಾಕಾರರು ವಿಡಿಯೋ ಮಾಡದಂತೆ ತಾಕೀತು ಮಾಡಿ ಸ್ಥಳದಿಂದ ಓಡಿಸಿದ್ದಾರೆನ್ನಲಾಗಿದೆ.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ, “ಘಟನೆಗೆ ನೇರವಾಗಿ ಡೀಸಿಯವರೇ ಕಾರಣರಾಗಿದ್ದಾರೆ. ಹೀಗಾಗಿ ಅವರು ಸ್ಥಳಕ್ಕಾಗಮಿಸಬೇಕು. ಪಟ್ಟಣದಲ್ಲಿ ಪುರಾತತ್ವ ಸ್ಮಾರಕಗಳ 100 ಮೀಟರೊಳಗೆ ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಖುಲ್ಲಾ ಪಡಿಸಬೇಕೆನ್ನುವುದರ ಬಗ್ಗೆ ಹೈಕೋರ್ಟ್ ಆದೇಶವಿದ್ದರೂ ಜಿಲ್ಲಾಧಿಕಾರಿ ಮತ್ತು ಪುರಸಭೆಯವರು ಕಟ್ಟಡ ತೆರವುಗೊಳಿಸುವುದನ್ನು ಬಿಟ್ಟು ಬಡ ಅಂಗಡಿಕಾರರು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಂಗಡಿಗಳ ಕಬ್ಜಾ ಪಡೆಯಲು ಹೊರಟಿದ್ದಾರೆ. ಬಡ ಅಂಗಡಿಕಾರ ಆತ್ಮಹತ್ಯೆಗೆ ಮುಂದಾಗಿದ್ದು, ಆತನ ಜೀವಕ್ಕೇನಾದರೂ ಹೆಚ್ಚು ಕಡಿಮೆಯಾದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ ಸೂಕ್ತ ಪರಿಹಾರವನ್ನು ಕೊಡಬೇಕು” ಎಂದು ಆಗ್ರಹಿಸಿದರು.

ಭಾರೀ ಬಂದೋಬಸ್ತ್ ಭಟ್ಕಳ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತಿಗಾಗಿ ಜಿಲ್ಲೆಯ ಎಎಸೈ, ಪಿಎಸೈ, ಸಿಪಿಐ, ಡಿವೈಎಸ್ಪಿ, ಸಿಬ್ಬಂದಿ, ಡಿಆರ್, ಕೆಎಸ್ಸಾರ್ಪಿಯನ್ನು ತರಿಸಲಾಗಿದೆ. ಉಡುಪಿಯಿಂದಲೂ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಕರೆಯಿಸಲಾಗಿದೆ. ಪಟ್ಟಣದ ಪುರಸಭೆ, ಹಳೇ ಬಸ್ ನಿಲ್ದಾಣ, ಸಂಶುದ್ದೀನ ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಗುರುವಾರ ರಾತ್ರಿ ಎಸ್ಪಿ ವಿನಾಯಕ ಪಾಟೀಲ್, ಹೆಚ್ಚುವರಿ ಎಸ್ಪಿ ಗೋಪಾಲ ಬ್ಯಾಕೋಡ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.